ಮಂಗಳೂರು(ನವದೆಹಲಿ): ಮುಕ್ತ ಹಾಗೂ ಪಾರದರ್ಶಕ ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿ ಕೃತಕ ಬುದ್ಧಿಮತ್ತೆ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.
ಇದಕ್ಕಾಗಿ ಗೂಗಲ್ ಜತೆ ಆಯೋಗ ಒಪ್ಪಂದವನ್ನೂ ಮಾಡಿಕೊಂಡಿದೆ. ಇದಲ್ಲದೆ ನಗದು ವ್ಯವಹಾರ ಮಾತ್ರವಲ್ಲ, ಭಾರಿ ಪ್ರಮಾಣದ ಯುಪಿಐ ಹಣದ ವಹಿವಾಟು ಹಾಗೂ ಬ್ಯಾಂಕ್ ವಹಿವಾಟು ಮೇಲೂ ಕಣ್ಣಿಡಲಿದೆ. ಇದಕ್ಕಾಗಿ ಪ್ರತ್ಯೇಕ ಎಐ ವಿಭಾಗವನ್ನೇ ಚುನಾವಣಾ ಆಯೋಗದಡಿ ತೆರೆಯಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುವ ತಪ್ಪು ಮಾಹಿತಿಗಳನ್ನು ಪತ್ತೆ ಹಚ್ಚಿ, ಅದನ್ನು ತೆಗೆದುಹಾಕುವ ಕೆಲಸವನ್ನು ಈ ಎಐ ವಿಭಾಗ ಮಾಡಲಿದೆ ಎಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳು ಪದೇ ಪದೇ ನಿಯಮ ಉಲ್ಲಂಘಿಸಿದರೆ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನೇ ಅಮಾನತು ಅಥವಾ ಬ್ಲಾಕ್ ಮಾಡುವಂತಹ ಕಠಿಣ ಕ್ರಮಕ್ಕೂ ಆಯೋಗ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.