ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿತ-ಇಬ್ಬರು ಸಾವು

ಮಂಗಳೂರು(ಕೋಲ್ಕತ್ತ): ಕೋಲ್ಕತ್ತದ ಗಾರ್ಡನ್ ರೀಚ್ ಪ್ರದೇಶದ ಹಜಾರಿ ಮೊಲ್ಲಾ ಬಗಾನ್‌ನಲ್ಲಿ ಮಾ.17ರ ತಡರಾತ್ರಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇದುವರೆಗೆ ಕನಿಷ್ಠ 10 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವ ಕೆಲವರನ್ನು ರಕ್ಷಿಸಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಕಟ್ಟಡ ಕುಸಿಯುವ ಮೊದಲು ಕಾಂಕ್ರೀಟ್ ತುಂಡುಗಳು ಬಿದ್ದಿದ್ದವು. ಕಟ್ಟಡ ಕುಸಿದ ತಕ್ಷಣ ಭಾರೀ ಸದ್ದು ಕೇಳಿ ಬಂದಿದ್ದು, ದಟ್ಟ ಧೂಳು ಆವರಿಸಿತು. ಸಮೀಪದ ಗುಡಿಸಲುಗಳ ಮೇಲೆ ಕಟ್ಟಡದ ಅವಶೇಷಗಳು ಬಿದ್ದಿವೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ‘ತುರ್ತು ರಕ್ಷಣೆ ಮತ್ತು ಪರಿಹಾರಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯ ವಿಪತ್ತು ನಿರ್ವಹಣಾ ತಂಡದ ನೆರವು ಪಡೆಯುವಂತೆ ನಾನು ಮುಖ್ಯ ಕಾರ್ಯದರ್ಶಿ, ಗೃಹ ಸಚಿವರು ಹಾಗೂ ಪೊಲೀಸ್‌ ಕಮಿಷನರ್‌ ಅವರನ್ನು ಒತ್ತಾಯಿಸುತ್ತೇನೆ’ ಎಂದು ಪಶ್ಚಿಮ ಬಂಗಾಳ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here