ಮಂಗಳೂರು(ಬೆಂಗಳೂರು): ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯದಿಂದಲೇ ಗೆದ್ದು ಬರುತ್ತಿದ್ದ, ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ದಟ್ಟವಾಗಿದೆ. ಕಾಂಗ್ರೆಸ್ ಸೇರಿ ಅವರು ಮೈಸೂರು-ಮಡಿಕೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲ್ಲಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆರಂಭವಾಗಿದೆ. ಇದಕ್ಕೆ ಪೂರಕವಾಗುವಂತೆ ಸದಾನಂದ ಗೌಡ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ, ಡಿವಿ ಸದಾನಂದಗೌಡ ಅವರಿಗೆ ಕೇಂದ್ರ ಬಿಜೆಪಿ ಶಾಕ್ ನೀಡಿ ಆ ಕ್ಷೇತ್ರದಿಂದ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸಿದೆ. ಇದರಿಂದಾಗ ಅಸಮಾಧಾನಕ್ಕೊಳಗಾಗಿರುವ ಸದಾನಂದಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಒಕ್ಕಲಿಗ, ಕುರುಬ, ಲಿಂಗಾಯತ ಮತ್ತು SC-ST ಸಮುದಾಯಗಳೇ ಹೆಚ್ಚಿರುವ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಣಕ್ಕಳಿಸಿದ್ದು, ಅವರ ವಿರುದ್ಧ ಎಲ್ಲಾ ಸಮುದಾಯದ ವಿಶ್ವಾಸ ಗಿಟ್ಟಿಸಿರುವ ಡಿವಿ ಸದಾನಂದಗೌಡ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕರು ಡಿವಿ ಸದಾನಂದಗೌಡ ಜೊತೆ ಮಾತುಕತೆ ನಡೆಸುತ್ತಿದ್ದು, ಒಂದೆರಡು ದಿನದಲ್ಲಿ ಡಿವಿ ಸದಾನಂದಗೌಡರು ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇಂದು(ಮಾ.18) ತಮ್ಮ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಡಿವಿ ಸದಾನಂದಗೌಡ ಅವರು ಮಾತನಾಡಿ, ಸ್ವಾರ್ಥಕ್ಕಾಗಿ ಟಿಕೆಟ್ ತಪ್ಪಿಸಿದರೆ ಯೋಚನೆ ಮಾಡಬೇಕಾಗುತ್ತದೆ. ಕಾಂಗ್ರೆಸ್ ನಾಯಕರು ನನ್ನ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ನನ್ನ ಕುಟುಂಬ ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಇಂಗಿತವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸದಾನಂದಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸ್ಪರ್ಧೆಗೆ ಇಳಿಸಲಿದ್ದಾರೆ ಎನ್ನಲಾಗಿದೆ. ಸದಾನಂದಗೌಡ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿದ್ದರೂ ಅವರು ಎಲ್ಲಾ ಸಮುದಾಯಗಳ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.
ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣ ಒಡೆಯರ್ ಅವರನ್ನು ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ಬೆನ್ನಲ್ಲೇ, ಪಕ್ಷದ ನಿರ್ಧಾರವನ್ನು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ಅವರ ಅನುಯಾಯಿಗಳು ಕ್ಷೇತ್ರದಲ್ಲಿ ಪಕ್ಷದ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದರು. ಹೀಗಿರುವಾಗ ಸದಾನಂದಗೌಡರನ್ನು ಕೈ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವವಿರುವ ಕ್ಷೇತ್ರವಾಗಿದ್ದು, ಮೈಸೂರು-ಕೊಡಗು ರಾಜಮನೆತನದ ವಿರುದ್ಧ ಒಕ್ಕಲಿಗ ಸಮುದಾಯದ ಸದಾನಂದಗೌಡ ಅವರನ್ನು ಕಣಕ್ಕಿಳಿಸಿದರೆ ಆ ಕ್ಷೇತ್ರವನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಡಿಕೆಶಿ ಮತ್ತಿತರರು ಸದಾನಂದ ಗೌಡರನ್ನು ಸಂಪರ್ಕಿಸಿದ್ದು ಸದಾನಂದ ಗೌಡರ ಉತ್ತರಕ್ಕೆ ಕಾಯಲಾಗುತ್ತಿದೆ.