ಮಂಗಳೂರು: ನಾನು ಜೆಡಿಎಸ್ ನಲ್ಲೇ ಇದ್ದೇನೆ, ಬಿಜೆಪಿಗೂ ಬೆಂಬಲ ನೀಡುತ್ತೇನೆ. ಆದರೆ ಬಿಜೆಪಿಯ ಎಲ್ಲಾ ಸಿದ್ಧಾಂತಗಳ ಬಗ್ಗೆ ನನಗೆ ಸಹಮತವಿಲ್ಲ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆಗಿಳಿಯುವ ನಿಟ್ಟಿನಲ್ಲಿ ನನ್ನ ಬೆಂಬಲಿಗರು ಇಚ್ಛೆ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ನಿರ್ಧಾರ ಇನ್ನೂ ಮಾಡಿಲ್ಲ. ಮಾ.28ರಂದು ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷ ತೊರೆದಿರುವಿರಾ ಎಂಬ ಪ್ರಶ್ನೆಗೆ, ನಾನು ಜೆಡಿಎಸ್ ನಲ್ಲೇ ಇದ್ದೇನೆ. ಜೆಡಿಎಸ್ ಪಕ್ಷ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಎಲ್ಲಾ ಸಿದ್ಧಾಂತಗಳಿಗೆ ಸಹಮತ ಇಲ್ಲ. ಸಿಎಎ, ಹಿಜಾಬ್, ಆಝಾನ್ ಗೆ ವಿರೋಧದ ಬಿಜೆಪಿಯ ಸಿದ್ಧಾಂತಗಳನ್ನು ನಾನು ವಿರೋಧಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲ್ಲಡ್ಕ ಶಾಲೆಗೆ ಭೇಟಿಯನ್ನು ನಾನು ವಿರೋಧಿಸಿದ್ದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಲು ಪಕ್ಷದ ರಾಜ್ಯಾಧ್ಯಕ್ಷರೇ ಕಾರಣ ಎಂದು ದೂರಿದ ಮೊಯ್ದಿನ್ ಬಾವ, ಶಾಸಕರೇ ಆಗಿದ್ದ ಬಿಜೆಪಿಯ ಜಗದೀಶ್ ಶೆಟ್ಟರ್ ಅವರನ್ನು ಹೆಲಿಕಾಪ್ಟರ್ಗಳ ಮೂಲಕ ಬರ ಮಾಡಿಕೊಂಡಿದ್ದ ಕಾಂಗ್ರೆಸ್, ಅದೇ ಸಂದರ್ಭದಲ್ಲಿ ನಾನು ಉಪವಾಸವಿದ್ದರೂ ಟಿಕೆಟ್ ಬಯಸಿ ಪಕ್ಷದ ನಾಯಕರನ್ನು ಕಾಯುತ್ತಿದ್ದರೂ ನನ್ನನ್ನು ಕರೆದು ಮಾತನಾಡುವ ಸೌರ್ಜನ್ಯ ತೋರಿಸಲಿಲ್ಲ. ಹಾಗಾಗಿ ನಾನು ಪಕ್ಷ ತೊರೆದು ಜೆಡಿಎಸ್ ಸೇರುವ ಅನಿರ್ವಾಯತೆ ಎದುರಾಯಿತು. ಆ ಸಂದರ್ಭ ನಾನು ಜೆಡಿಎಸ್ ನಿಂದ ಸ್ಪರ್ಧಿಸಲು ಮುಂದಾದೆ. ನನ್ನ ಬೆಂಬಲಿಗರು ಪಕ್ಷೇತರನಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಆದರೆ ನಾನು ಆ ಸಂದರ್ಭ ತಪ್ಪು ಮಾಡಿದ್ದೆ. ಈ ಬಾರಿ ಬೆಂಬಲಿಗರ ಸಲಹೆಯಂತೆ ಮುಂದುವರಿಯಲಿದ್ದೇನೆ ಎಂದು ಹೇಳಿದ್ದಾರೆ.