ಚುನಾವಣಾ ಬಾಂಡ್ ಪ್ರಪಂಚದ ದೊಡ್ಡ ಹಗರಣ-ಇಲೆಕ್ಟೊರಲ್ ಬಾಂಡ್ ನಿಯಮ ಗೌಪ್ಯವಾಗಿಟ್ಟಿದೇಕೆ?-ಪ್ರಧಾನಿ ನರೇಂದ್ರ ಮೋದಿ ಮೇಲೆ ಬಹುಭಾಷಾ ನಟ ಪ್ರಕಾಶ್ ರೈ ತೀವ್ರ ವಾಗ್ದಾಳಿ

ಮಂಗಳೂರು: ಪ್ರಪಂಚದಲ್ಲಿ ನಡೆದಿರುವ ದೊಡ್ಡ ಹಗರಣ ಚುನಾವಣಾ ಬಾಂಡ್ ಖರೀದಿ ಪ್ರಕರಣವಾಗಿದ್ದು, ಇದರಲ್ಲಿ ಭಾಗಿಯಾದವರು ದೇಶದ್ರೋಹಿಗಳೇ ಹೊರತು, ಇದನ್ನು ಪ್ರಶ್ನಿಸುವವರಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಚುನಾವಣಾ ಬಾಂಡ್ ಕುರಿತಂತೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿರುವ ಪ್ರಕಾಶ್ ರಾಜ್, ‘ಮನ್ ಕಿ ಬಾತ್’ನಲ್ಲಿ ಈ ಬಗ್ಗೆಯೂ ಮಾತನಾಡಿ. ಈ ಚುನಾವಣಾ ಬಾಂಡ್ ಗಳನ್ನು ದೇಶ ಉದ್ಧಾರಕ್ಕಾಗಿ ತೆಗೆದುಕೊಂಡಿದ್ದಾ? ತಿಳಿಸಿ ಎಂದು ಸವಾಲು ಹಾಕಿದ್ದಾರೆ. ಇಲೆಕ್ಟೊರಲ್ ಬಾಂಡ್ ನಿಯಮ ತಂದು ಅದನ್ನು ಗೌಪ್ಯವಾಗಿರಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಗೃಹ ಸಚಿವರೇ ಹೇಳುವಂತೆ ನಾವು 6,000 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಪಡೆದುಕೊಂಡಿದ್ದೇವೆ. ನಮ್ಮಲ್ಲಿ 330 ಸಂಸದರಿದ್ದಾರೆ. ಅದನ್ನು ಹಂಚಿಕೊಂಡರೆ ಕಡಿಮೆ ಆಗುತ್ತೆ ಅಂದಿದ್ದಾರೆ. ಇದು ಬ್ಯಾಂಕ್ ಲೂಟಿ ಮಾಡಿದ ಹಾಗೆ, ಇದು ಭ್ರಷ್ಟಾಚಾರ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ಡಿಎಂಕೆ ಸೇರಿದಂತೆ ಹಲವು ಪಕ್ಷದವರು ಇಂತಹ ಕಂಪನಿಗಳಿಂದ ಬಾಂಡ್ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿಯವರು ಯಾಕೆ ಯಾರಿಂದ ಪಡೆದಿದ್ದಾಗಿ ಹೇಳುತ್ತಿಲ್ಲ. ಬಿಜೆಪಿ ಪಡೆದಿರುವ ಬಾಂಡ್ ಹಣವೆಲ್ಲಾ ದಾಳಿಯ ಬಳಿಕ ಸಂಗ್ರಹಿಸಿದ್ದಾಗಿದೆ. ಕಂಪೆನಿಯೊಂದು 500 ಕೋಟಿ ರೂ. ಲಂಚ ಕೊಟ್ಟು, ಆತನಿಗೆ ಒಂದೂವರೆ ಸಾವಿರ ಕೋಟಿ ಅಥವಾ 2 ಸಾವಿರ ಕೋಟಿ ನೀವು ಗುತ್ತಿಗೆ ಕೊಡುತ್ತೀರಿ ಅಂದರೆ, ಆ ಗುತ್ತಿಗೆ ಹಣ ಜನರ ದುಡ್ಡಲ್ಲವೇ? ಚುನಾವಣೆಗೆ ಹಣ ಬೇಕು ಎಂದು ಹೇಳುವವರು ಅದಕ್ಕಾಗಿ ದೇಶವನ್ನು ಕೆಡಿಸಿದ್ದಾ?, ಆ ಹಣದಲ್ಲೇ ಶಾಸಕರು, ಸಂಸದರನ್ನು ಖರೀದಿ ಮಾಡಿದ್ದೀರಾ? ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. ಇಡಿ ರೈಡ್ ಗೊಳಗಾದ ಕಂಪೆನಿಗಳು ಮಾರನೇ ದಿನವೇ ಬಾಂಡ್ ಖರೀದಿ ಮಾಡಿವೆ. ಅವರು ಕಳ್ಳರು ಎಂದು ಗೊತ್ತಿದ್ದೂ ಯಾಕೆ ಬಾಂಡ್ ಪಡೆದಿರಿ? ಇಡಿ ರೈಡ್ ಆದ ಮೇಲೆ ನಿಮಗೆ ಹಣ ಕೊಟ್ಟರೆ ಸರಿನಾ? ಈಗ ಅಂಥವರಿಂದ ಹಣ ತೆಗೆದುಕೊಂಡ ನಿಮ್ಮ ಮೇಲೆ ಯಾಕೆ ರೈಡ್ ಆಗುವುದಿಲ್ಲ? ಈ ರೀತಿ ದುಡ್ಡು ಪಡೆದು ನೀವು ದೇಶ ಮಾರ್ತಾ ಇಲ್ವಾ? ಅದು ಪಾಪದ ಹಣ ಅಂತ ಗೊತ್ತಿಲ್ವಾ ನಿಮಗೆ? ಮನ್ ಕಿ ಬಾತ್ ನಲ್ಲಿ ಅದನ್ನೂ ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದು ಸಲ ನೋಡಿ ಆಯ್ತು. ಸಾಕಷ್ಟು ಪಕ್ಷಗಳಿವೆ, ಅದಕ್ಕೆ ಕಾರ್ಯಕರ್ತರಿದ್ದಾರೆ. ಜನರ ಧ್ವನಿಯಾಗಿರೋದು ಮುಖ್ಯ ಎನ್ನುವ ಕಾರಣಕ್ಕೆ ನಾನು ಜನರ ಬಳಿ ಇರುತ್ತೇನೆ. ಇಂಥ ರಾಜಕಾರಣವನ್ನು ಪ್ರಶ್ನಿಸುತ್ತೇನೆ. ನನ್ನ ಚಿಂತನೆ ಮಂಡಿಸುತ್ತೇನೆ. ಪ್ರಜೆಗಳಾಗಿ ಆಳುವವರನ್ನು ಪ್ರಶ್ನಿಸಲೇಬೇಕು, ಅದು ನಮ್ಮ ಹಕ್ಕು. ಕೇಳಿದಕ್ಕೆ ಉತ್ತರ ಕೊಡಲ್ಲ ಅಂದರೆ ಆಗಲ್ಲ. ಯಾಕೆಂದರೆ ಎಲ್ಲರೂ ಟ್ಯಾಕ್ಸ್ ಕಟ್ಟುತ್ತೇವೆ. ನಮಗೆ ನಮ್ಮ ಹಣಕ್ಕೆ ಉತ್ತರ ಕೊಡಲೇಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದರು. ಮೈಸೂರಿನ ಚುನಾವಣಾ ಕಣದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಪಕ್ಷವಿರಲಿ, ನಿಮ್ಮ ಅಭ್ಯರ್ಥಿಯನ್ನು ನೋಡಿ ಓಟ್ ಮಾಡಿ. ಪಕ್ಷವನ್ನು ನೋಡಿ ಓಟು ಮಾಡಬೇಡಿ, ಅದು ಬಿಜೆಪಿಯೇ ಇರಲಿ, ಬೇರೆ ಪಕ್ಷವೇ ಇರಲಿ. ಅಭ್ಯರ್ಥಿ ಕೆಲಸ ಮಾಡುತ್ತಾನಾ? ನಿಮ್ಮ ಕಷ್ಟಕ್ಕೆ ಪ್ರತಿಕ್ರಿಯಿಸುತ್ತಾನಾ? ನಿಮಗೆ ಕೈಗೆಟುಕುವಂತಿದ್ದಾರಾ? ಅವರು ಯಾವ ಪಕ್ಷದವರು ಆದರೂ ನಿಮಗೇನು? ಇಂಥ ಪ್ರಜ್ಞೆಯನ್ನು ಮತದಾರರು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲೇ ಸಮೀಕ್ಷೆಯೂ ಒಂದು ವ್ಯಾಪಾರ ಆಗಿದೆ. ಅವರೂ ದುಡ್ಡು ಕೊಟ್ಟು ಮಾಡಿಸುತ್ತಾರೆ. ಮಾಧ್ಯಮವನ್ನು ಪರಿಶೀಲಿಸಿದರೆ, ಯಾವ ಪಕ್ಷದ್ದು ಎಂದು ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ಜನರನ್ನು ಮರಳು ಮಾಡಲಾಗಿದೆ. ಇನ್ನು ಜನ ಮರಳಾಗುವುದರಲ್ಲಿ ಅರ್ಥ ಇಲ್ಲ ಇಂತಹ ಸಮೀಕ್ಷೆ ನಂಬಲರ್ಹವಲ್ಲ. ಮತದಾರರು ಸರಿಯಾಗಿ ನಿರ್ಧರಿಸಿ ಗೌಪ್ಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದ್ದಾರೆ. ಆಡಳಿತದಲ್ಲಿರುವ ಪಕ್ಷವನ್ನು ನಾವು ಪ್ರಶ್ನಿಸುತ್ತೇನೆ ಎಂದು ಜನ ಗೌರವ ಇಟ್ಟಿದ್ದಾರೆ. ಹಾಗಾಗಿ ಯಾವುದೇ ಪಕ್ಷ ಸೇರಲು ನನ್ನ ಮನಃಸಾಕ್ಷಿ ಅದನ್ನು ಒಪ್ಪಿಕೊಳ್ಳಲ್ಲ. ಇಲ್ಲದಿದ್ದರೆ ಯಾವುದಾದರೂ ಪಕ್ಷ ಸೇರುವುದಕ್ಕೆ ಎಷ್ಟು ಹೊತ್ತು? ಕ್ಯಾಂಪೇನ್ಗೂ ಹೋಗಲ್ಲ. ಜನರ ಪಕ್ಷ ನಾನು. ಹಾಗೇ ಇರುತ್ತೇನೆ ಎಂದು ಹೇಳಿದ್ದಾರೆ.

ನಾನು 400 ಸೀಟು ತಕೋತೀನಿ ಅನ್ನುವುದು ಅಹಂಕಾರ ಅಲ್ವಾ? ನೀವ್ಯಾರೀ ತಗೊಳ್ಳೋಕೆ, ಜನ ಕೊಡೋದು. ಯಾರನ್ನು ಹೆದರಿಸ್ತಿದ್ದೀರಿ? ಹೀಗೆ ಬಂಗಾಳ, ಕರ್ನಾಟಕ, ತಮಿಳುನಾಡಲ್ಲಿ ಹೇಳಿದ್ರಿ, ಆಯ್ತಾ? ಆಗ್ತಾ ಇಲ್ವಲ್ಲ? 400 ಗೆಲ್ತೀವಿ ಅನ್ನೋದಕ್ಕೆ ಏನು ಧೈರ್ಯ ನಿಮಗೆ? ಇಷ್ಟು ಸಾವಿರ ಕೋಟಿ ರೂ. ಲಂಚ ತಗೊಂಡಿದ್ದೀವಿ ಅನ್ನೋ ಧೈರ್ಯವೇ? ಧರ್ಮ ದುರುಪಯೋಗ ಮಾಡಿ ಗೆದ್ಬಿಡ್ತೀವಿ ಅನ್ನೋ ಧೈರ್ಯವೇ? ನಾವು ಇನ್ನೂ ಮತ ಚಲಾಯಿಸಿಲ್ಲ. ನೀವು ಹೇಗಪ್ಪಾ 400 ಅಂತ ಹೇಳೋದು ? ಅದು ಸುಮ್ನೆ ಇಮೇಜ್ ಕ್ರಿಯೇಟ್ ಮಾಡುವ ತಂತ್ರ ಮಾತ್ರ ಎಂದು ಪ್ರಕಾಶ್ ರಾಜ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಧಾನಿ ಅವರ ಪರಿವಾರ ಏನು ಅಂತ ಈಗಾಗಲೇ ಬಯಲಾಗಿದೆ. ಲಾಟರಿ ಮಾಡುವ ಕಂಪೆನಿ ಪರಿವಾರ, ಫಾರ್ಮಾ ಕಂಪೆನಿ, ಅದಾನಿ ಪರಿವಾರ, ರೇಪ್ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಕೂಡಾ ಅವರದ್ದೇ ಪರಿವಾರ. ಸಾವಿರಾರು ಕೋಟಿ ರೂ. ಸಂಗ್ರಹಿರುವುದು ಯಾತಕ್ಕಾಗಿ? ಒಂದು ಪಕ್ಷಕ್ಕೆ ಅಷ್ಟು ದುಡ್ಡು ಬೇಕಾ? ಆಡಳಿತ ನಡೆಸುತ್ತಿರುವವರು ಬಿಜೆಪಿಯವರು, ಅದು ಬಿಟ್ಟು ಅವರು ತಕೊಂಡಿದ್ದಾರೆ ಅನ್ನುವುದೇ? ಅವರು ಏನೋ ತಿಂತಾರೆ ಅಂದರೆ ನೀವೂ ತಿಂತೀರಾ? ಅಷ್ಟು ಬೃಹತ್ ದುಡ್ಡು ತಕೊಂಡು ಅದನ್ನೂ ಗೌಪ್ಯವಾಗಿಟ್ಟುಕೊಂಡಿದ್ದು ಯಾಕೆ? ಈಗ ಬೆತ್ತಲಾಗ್ತಾ ಇದ್ದೀರಿ, ಹಾಗಿದ್ದರೂ ಸುಳ್ಳು ಹೇಳಿಕೊಂಡೇ ಓಡಾಡೋದು ತಪ್ಪಲ್ವಾ? ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

LEAVE A REPLY

Please enter your comment!
Please enter your name here