ಮಂಡ್ಯ, ಹಾಸನ, ಕೋಲಾರ ಜೆಡಿಎಸ್ ಪಾಲು-ಮಂಡ್ಯದಲ್ಲಿ‌ ಎಚ್‌ಡಿಕೆ ಸ್ಪರ್ಧೆ ಬಹುತೇಕ ಖಚಿತ, ಸುಮಲತಾಗೆ ನಿರಾಸೆ

ಮಂಗಳೂರು(ಬೆಂಗಳೂರು): ಮಂಡ್ಯ, ಹಾಸನ ಜತೆಗೆ ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಘೋಷಣೆ ಮಾಡಿದ್ದಾರೆ.

ಇದರೊಂದಿಗೆ ಮೈತ್ರಿ ನಾಯಕರು 25+3 ಸೂತ್ರದಂತೆ ಸೀಟು ಹಂಚಿಕೆ ಮಾಡಿಕೊಂಡಿದ್ದಾರೆ. ಬಹು ಚರ್ಚೆಗೆ ಕಾರಣವಾಗಿದ್ದ ಕೋಲಾರ ಹಾಗೂ ಮಂಡ್ಯ ಕ್ಷೇತ್ರಗಳು ಜೆಡಿಎಸ್‌ಗೆ ಸಿಕ್ಕಿದ್ದು, ಅಭ್ಯರ್ಥಿ ಬಗ್ಗೆ ಜೆಡಿಎಸ್ ನಾಯಕರು ನಿರ್ಧರಿಸುತ್ತಾರೆ. ಈ ನಡುವೆಯೇ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಾಗಾರದಲ್ಲಿ ಮಾತನಾಡಿದ ರಾಧಾ ಮೋಹನ್ ದಾಸ್ ಅಗರ್ವಾಲ್, ಮೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ. ಸುಮಲತಾ ಅವರಿಗೆ ಟಿಕೆಟ್ ತೀರ್ಮಾನ ಆಗಿಲ್ಲ ಎಂದು ಹೇಳಿದ್ದು ಸತ್ಯವಾಗಿತ್ತು. ಈಗ ಜೆಡಿಎಸ್ ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ. ಚುನಾವಣೆ ಪ್ರಚಾರ ಆರಂಭ ಆದಮೇಲೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇದ್ದಾರೆ ಎಂದು ಬಿಜೆಪಿ ಉಸ್ತುವಾರಿ ಅಗರ್ವಾಲ್ ತಿಳಿಸಿದ್ದಾರೆ. ಕೋಲಾರದ ಸಂಸದ ಮುನಿಸ್ವಾಮಿ ನಮ್ಮ ಕಾರ್ಯಕರ್ತ, ಅತ್ಯಂತ ಸಮರ್ಪಣಾ ಭಾವದ ವ್ಯಕ್ತಿ. ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ. ನಾನು ಯಾವುದೇ ಒಳಜಗಳದ ಬಗ್ಗೆ ಚಿಂತೆ ಮಾಡಲ್ಲ. ದೊಡ್ಡ ಪಕ್ಷ ಕೋಟ್ಯಾಂತರ ಕಾರ್ಯಕರ್ತರು ಇದ್ದಾರೆ, ಅಸಮಾಧಾನಿತರು ಇದ್ದೇ ಇರ್ತಾರೆ. ನಾನು ಅದ್ಯಾವುದನ್ನ ನೋಡಲ್ಲ. ಅಂತಹ ಸಮಸ್ಯೆ ಸಹ ಇಲ್ಲ ಎಂದು ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here