ಮಂಗಳೂರು/ಬೆಂಗಳೂರು: ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿ ಮತ್ತು ವಿತರಿಸುವ ಸಾಲದ ಬಡ್ಡಿ ದರಕ್ಕೆ ರಾಜ್ಯ ಸರಕಾರ ಲಗಾಮು ಹಾಕಿ ಆದೇಶ ಹೊರಡಿಸಿದೆ. ಏಪ್ರಿಲ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ಬರುವಂತೆ ಆದೇಶದಲ್ಲಿ ಸ್ಪಷ್ಟವಾಗಿ ನಿರ್ದೇಶಿಸಲಾಗಿದೆ.
ಸಾಲಗಾರರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಕಲಂ 3ಬಿ ರಡಿ ಸರಕಾರಕ್ಕೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ 1934 ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆ 1949 ಹಾಗೂ ಸಹಕಾರ ಸಂಘಗಳ ನಿಬಂಧಕರ ಸೂಚನೆಗಳನ್ನು ಉಲ್ಲಂಘಿಸದಿರಲು ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಆದರೆ ಆ ಸೂಚನೆಗಳನ್ನು ಪಾಲಿಸದಿರುವುದು ಆರ್‌ಬಿಐ ಗಮನಕ್ಕೆ ಬಂದಿದೆ. ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳು ಸದಸ್ಯರ ಸಾಲದ ಅವಶ್ಯಕತೆಗನುಗುಣವಾಗಿ ಠೇವಣಿ ಸಂಗ್ರಹಿಸದೆ ಅನಿಯಮಿತ ಬಡ್ಡಿ ದರ ನಿಗದಿಪಡಿಸಿ ಮನಸೋಇಚ್ಛೆ ಠೇವಣಿ ಸಂಗ್ರಹಿಸಲಾಗುತ್ತಿದೆ. ಸಾಲದ ಮೇಲೆ ಮಿತಿಮೀರಿದ ಬಡ್ಡಿದರವನ್ನು ನಿಗದಿಪಡಿಸಿ ಗುಣಮಟ್ಟದ ಹಣಕಾಸು ನಿರ್ವಹಣೆ ಮಾಡುತ್ತಿಲ್ಲ ಎಂಬ ಬಗ್ಗೆ ಸರಕಾರ, ಇಲಾಖೆಗೆ ದೂರುಗಳು ಬಂದಿದ್ದವು. ಈ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲೂ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಟ್ಯಾಫ್‌ಕಾಬ್ ಸಭೆಗಳಲ್ಲಿ ಕೂಡಾ ಚರ್ಚೆಯಾಗಿತ್ತು.
ಸಹಕಾರ ಸಂಘಗಳ ಹಣ ದುರುಪಯೋಗ ಹಾಗೂ ಠೇವಣಿದಾರರಿಗೆ ವಂಚನೆ ಮಾಡಿರುವ ಹಲವು ಪ್ರಕರಣವು ಸರಕಾರದ ಗಮನಕ್ಕೆ ಬಂದಿದ್ದು, ನಿಯಮ ಬಾಹಿರವಾಗಿ ಠೇವಣಿ ಸಂಗ್ರಹಿಸುತ್ತಿರುವುದು, ಸಾಲದ ಮೇಲೆ ಮಿತಿ ಮೀರಿದ ಬಡ್ಡಿ ವಿಧಿಸುತ್ತಿರುವುದು, ಸಹಕಾರ ಸಂಘಗಳಲ್ಲಿ ಹೂಡಿಕೆ ಮಾಡಲಾದ ಹಣವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಬಡ್ಡಿ ದರ ನಿಗದಿಪಡಿಸುವ ಕುರಿತು ಹಲವು ನಿರ್ದೇಶನಗಳನ್ನು ಹೊರಡಿಸಲಾಗಿದೆ.
ಆದೇಶದಲ್ಲಿರುವ ನಿರ್ದೇಶನಗಳು:
ಸರಕಾರಿ ಸ್ವಾಮ್ಯದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ನಾನಾ ಪ್ರಕಾರದ ಠೇವಣಿ ಮೇಲೆ ನಾನಾ ಅವಧಿಗೆ ನಿಗದಿಪಡಿಸುವ ಬಡ್ಡಿ ದರ ಅಥವಾ ಅದರ ಮೇಲೆ ಶೇ.2ರಷ್ಟು ಅಧಿಕ ಬಡ್ಡಿಯನ್ನು ಮಾತ್ರ ನಿಗದಿಪಡಿಸತಕ್ಕದ್ದು. ಹಿರಿಯ ನಾಗರಿಕರ ಠೇವಣಿ ಮೇಲೆ ಶೇ.0.50ರಷ್ಟು ಅಧಿಕ ಬಡ್ಡಿಯನ್ನು ನಿಗದಿಪಡಿಸಬಹುದಾಗಿದೆ. ಪಿಗ್ಮಿ ಠೇವಣಿ ಸಂಗ್ರಹ ಮೇಲೆ ಶೇ.3ಕ್ಕಿಂತ ಹೆಚ್ಚು ಕಮಿಷನ್ ನೀಡುವಂತಿಲ್ಲ.
ಪ್ರಾಥಮಿಕ ಸಹಕಾರ ಸಂಘ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಚಿಸಲಾದ ಫರ್ಮ್ ಕಂಪನಿ ಅಥವಾ ಯಾವುದೇ ಇತರ ರೀತಿಯಲ್ಲಿ ಠೇವಣಿ ಸಂಗ್ರಹಿಸುವಂತಿಲ್ಲ. ಸಂಘದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವಂತಿಲ್ಲ. ಸಹಕಾರ ಸಂಸ್ಥೆಗಳು ಸ್ಥಾನಿಕ ಹಣಕಾಸು ಸಂಸ್ಥೆಗಳಾಗಿದ್ದು, ಇಂತಹ ಸಹಕಾರ ಸಂಸ್ಥೆಗಳಲ್ಲಿ ಮಾರ್ಕೆಂಟಿಂಗ್ ಎಕ್ಸಿಕ್ಯೂಟಿವ್ ಮುಖಾಂತರ ಕಮಿಷನ್, ಇನ್‌ಸೆಂಟಿವ್ ಕೊಡುವುದರ ಮೂಲಕ ಠೇವಣಿ ಸ್ವೀಕರಿಸುವಂತಿಲ್ಲ. ಹೆಚ್ಚುವರಿ ಸಂಪನ್ಮೂಲವನ್ನು ಕಡ್ಡಾಯವಾಗಿ ಅಪೆಕ್ಸ್ ಬ್ಯಾಂಕ್ ಮತ್ತು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡತಕ್ಕದ್ದು. ವಿತರಿಸುವ ಸಾಲಗಳಿಗೆ ಶೇ.12ರಷ್ಟು ಬಡ್ಡಿ ಮೀರತಕ್ಕದ್ದಲ್ಲ. ಸುಸ್ತಿ ಪ್ರಕರಣಗಳಲ್ಲಿ ಹೆಚ್ಚುವರಿಯಾಗಿ ಗರಿಷ್ಠ ಶೇ.2ರಷ್ಟು ಬಡ್ಡಿದರ ಮೀರತಕ್ಕದ್ದಲ್ಲ.
ಪತ್ತಿನ ಸಹಕಾರ ಸಂಘಗಳು ವಿವಿಧ ಸ್ವರೂಪದ ಸಾಲ ಸೌಲಭ್ಯಕ್ಕೆ ಮಾತ್ರ ಸೀಮಿತ. ಆಡಳಿತ ಮಂಡಳಿ ಬಡ್ಡಿ ದವರನ್ನು ಪರಿಷ್ಕರಿಸಿ ಈ ಕುರಿತು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಹಿರಿಯ ಸಹಕಾರಿ ಅಧಿಕಾರಿಗಳು ತ್ರೈಮಾಸಿಕವಾಗಿ ಸಭೆ ನಡೆಸಿ ಬಡ್ಡಿದರ ಪರಿಷ್ಕರಿಸಿ ನಿಗದಿಪಡಿಸುತ್ತಿರುವ ಕುರಿತು ಪರಾಮರ್ಶಿಸುವುದು ಹಾಗೂ ಉಲ್ಲಂಘನೆ ಮಾಡುವ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಅಧಿನಿಯಮ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ವಿಫಲರಾಗುವ ಇಲಾಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.