25 ಲಕ್ಷ ರೂ. ಲಂಚ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿ – ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು 

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಆಯುಕ್ತ ಮನ್ಸೂರ್ ಆಲಿ ಅವರು 25 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದು ರಾಜ್ಯದ ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿ ಎಂದು ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಹೇಳಿದ್ದಾರೆ.

ಜಿಲ್ಲಾ ಬಿಜೆಪಿಯ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚಗುಳಿತನ, ಭ್ರಷ್ಟಾಚಾರದ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಟೀಕಿಸಿದರು. ಮನ್ಸೂರ್ ಆಲಿ ಅವರು ಮುಡಾ ಆಯುಕ್ತರಾಗಿ ಬಂದಾಗಲೇ ಅವರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಕಾಂಗ್ರೆಸ್ ಸರಕಾರ ಹಣ ಪಡೆದು ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ನೇಮಿಸಿರುವ ಬಗ್ಗೆ ಆಗಲೇ ಅಪಸ್ವರಗಳು ಬಂದಿದ್ದವು. ಜನತೆಗೆ ಸುಲಲಿತವಾಗಿ ಸರಕಾರಿ ಸೇವೆಗಳನ್ನು ಒದಗಿಸುವ ಬದಲು ಅಲ್ಲಲ್ಲಿ ಅಡೆತಡೆಗಳನ್ನು ಒಡ್ಡಿ ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸಿ, ಆ ಮೂಲಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದು ಕಾಂಗ್ರೆಸ್ ಆಡಳಿತದ ಕಾರ್ಯಶೈಲಿ ಎಂದು ರವಿಶಂಕರ ಮಿಜಾರು ಪ್ರತಿಪಾದಿಸಿದರು. ತಾವು ಮುಡಾ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕರು ಅಧಿಕಾರಿಗಳಿಂದ ಸುಲಭವಾಗಿ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಹೆಲ್ಪ್‌ಡೆಸ್ಕ್‌ ಆರಂಭಿಸಲಾಗಿತ್ತು. ಪ್ರತಿ ಸಭೆಯಲ್ಲೂ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹೆಲ್ಪ್‌ಡೆಸ್ಕ್‌ ಕಾರ್ಯನಿರ್ವಹಿಸುತ್ತಿಲ್ಲ, ಬದಲಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಉದ್ಯಮಿಯೊಬ್ಬರು ತಮ್ಮ ಜಾಗವನ್ನು ಸರಕಾರಕ್ಕೆ ಬಿಟ್ಟುಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಸರಕಾರ ಕೊಡುವ ಟಿಡಿಆರ್ ಗೆ ಅನುಮೋದನೆ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದರು. ಇದಕ್ಕಾಗಿ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ಉದ್ಯಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗಡೆ, ಲಲ್ಲೇಶ್, ಮಾಜಿ ಕಾರ್ಪೊರೇಟರ್ ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಪ್ರಮುಖ ಕದ್ರಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here