ಮಂಗಳೂರು( ಚಿಕ್ಕಮಗಳೂರು ): ಉದ್ಯಮಿಯೊಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದ ಟಿಕೇಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಮಾಡಿ ಜೈಲು ಸೇರಿದ್ದ ಉಡುಪಿ ಜಿಲ್ಲೆಯ ಚೈತ್ರಾ ಗ್ಯಾಂಗ್ ಮತ್ತೆ ಸುದ್ದಿಯಲ್ಲಿದೆ. ಜೈಲು ಸೇರಿ ತಿಂಗಳುಗಳ ಬಳಿಕ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದ ಆರೋಪಿ ಸಾಕ್ಷಿಯೊಬ್ಬರ ಜೊತೆ ಕಿರಿಕ್ ಮಾಡಿದ್ದಾನೆ.
ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಕೇಸ್‌ನ ಪ್ರಮುಖ ಆರೋಪಿ, ಚೈತ್ರಾಳ ರೈಟ್ ಹ್ಯಾಂಡ್ ಆಗಿದ್ದ ಧನರಾಜ್ ಇದೀಗ ಕಿರಿಕ್ ಮಾಡಿಕೊಂಡಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾನೆ.ಚೈತ್ರಾ ಗ್ಯಾಂಗ್ ನ ಪ್ರಮುಖ ಆರೋಪಿಯಾಗಿರುವ ದನರಾಜ್ 2024ರ ಫೆಬ್ರವರಿ ತಿಂಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಈ ನಡುವೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಸೆಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಸೋಮವಾರ ಕಡೂರಿನ ಹೋಟೆಲ್ ಒಂದರಲ್ಲಿ ರಾಮು ಮೇಲೆ ಹಲ್ಲೆ ನಡೆಸಿದ್ದಾಗಿ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಗೋಪಾಲ್ ಜೀ ಪಾತ್ರದಾರಿಗೆ ರಾಮು ಸೆಲೂನಲ್ಲಿ ಮೇಕಪ್ ಮಾಡಿಲಾಗಿತ್ತು. ಪಾತ್ರದಾರಿ ಚೆನ್ನಾ ನಾಯ್ಕಗೆ ಮೇಕಪ್ ಮಾಡಿಸಲು ಧನರಾಜ್, ರಾಮು ಸೆಲೂನಿಗೆ ಕರೆದುಕೊಂಡು ಹೋಗಿದ್ದ. ರಾಮು ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಆರೋಪಿಗಳ ಬಂಧನವಾಗಿತ್ತು. ಆದ್ರೆ ಇದೀಗ ಷರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ಸೆಲೂನ್ ಮಾಲೀಕ ರಾಮುವಿಗೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಬಗ್ಗೆ ರಾಮು ಕುಟುಂಬ ಬೀರೂರು ಪೊಲೀಸರಿಗೆ ದೂರು ನೀಡಿದೆ. ಆದ್ರೆ ಈ ಬಗ್ಗೆ ಬೀರೂರು ಪೊಲೀಸರು ದೂರು ದಾಖಲಿಸದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಆರೋಪಿಯೊಬ್ಬ ಬೆದರಿಕೆ ಹಾಕುತ್ತಿದ್ದು, ಸೂಕ್ತ ನ್ಯಾಯ ಕೊಡಿಸಬೇಕು ಎಂದು ರಾಮು ಕುಟುಂಬ ಒತ್ತಾಯಿಸಿದೆ.