ವರದಿ ಮಾಡುವ ಭರಾಟೆ-ಸುದ್ದಿ ಸಂಸ್ಥೆ ಪಿಟಿಐ ಮತ್ತು ಎಎನ್‌ಐ ಮಧ್ಯೆ ಗಲಾಟೆ-ಡಿ ಕೆ ಸುರೇಶ್ ತರಾಟೆ

ಮಂಗಳೂರು(ಬೆಂಗಳೂರು): ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಮಾ.28ರಂದು ನಾಮಪತ್ರ ಸಲ್ಲಿಸಲೆಂದು ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ಸುದ್ದಿ ಸಂಸ್ಥೆಯಾಗಿರುವ ಪಿಟಿಐ ಪತ್ರಕರ್ತೆಯ ಮೇಲೆ ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಕರ್ತನೋರ್ವ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಪಿಟಿಐ ಸುದ್ದಿ ಸಂಸ್ಥೆ, ಎಎನ್‌ಐ ಪತ್ರಕರ್ತನ ನಡವಳಿಕೆಯನ್ನು ಖಂಡಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ತನ್ನ ಟ್ವೀಟ್‌ನಲ್ಲಿ ಪಿಟಿಐ, “ಎಎನ್‌ಐ ಪತ್ರಕರ್ತನಿಂದ ಅಸಹ್ಯಕರ ನಡವಳಿಕೆ ಇದು. ಡಿ ಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಅವರಿದ್ದ ಕಾರ್ಯಕ್ರಮವೊಂದರಲ್ಲಿ ಯುವ ಪಿಟಿಐ ಮಹಿಳಾ ವರದಿಗಾರ್ತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಲೈಂಗಿಕ ಕಿರುಕುಳ ನೀಡಿದ್ದಾನೆ” ಎಂದು ಆರೋಪಿಸಿದೆ. ಅಲ್ಲದೇ, ಎಎನ್‌ಐಯ ನಿರ್ದೇಶಕಿ ಸ್ಮಿತಾಪ್ರಕಾಶ್ ಅವರನ್ನು ಟ್ಯಾಗ್ ಮಾಡಿರುವ ಪಿಟಿಐ, “ನಿಮ್ಮ ಸಿಬ್ಬಂದಿಯ ಇಂತಹ ವರ್ತನೆಯನ್ನು ಒಪ್ಪುತ್ತೀರಾ?” ಎಂದು ಪ್ರಶ್ನಿಸಿದೆ.

“ಪಿಟಿಐ ತನ್ನ ಉದ್ಯೋಗಿಗಳನ್ನು ರಕ್ಷಿಸಲು ಯಾವ ಹಂತಕ್ಕೂ ಹೋಗಲಿದೆ. ಹಲ್ಲೆಯಿಂದಾಗಿ ನಮ್ಮ ವರದಿಗಾರ್ತಿಯು ಆಘಾತಕ್ಕೊಳಗಾಗಿದ್ದಾರೆ. ಘಟನೆಯ ಕುರಿತು ಎಫ್‌ಐಆರ್ ದಾಖಲಿಸಲಿದ್ದೇವೆ. ಅಲ್ಲದೇ, ಪಿಟಿಐ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಲಿದೆ” ಎಂದು ತಿಳಿಸಿದೆ.ಡಿ ಕೆ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಲೆಂದು ರಾಮನಗರದಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಪತ್ರಕರ್ತರ ಜೊತೆಗೆ ತೆರೆದ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಥಳೀಯ ಹಲವು ಮಂದಿ ಪತ್ರಕರ್ತರೂ ಸೇರಿ ರಾಷ್ಟ್ರೀಯ ಮಾಧ್ಯಮದ ಪತ್ರಕರ್ತರು ಕೂಡ ವಾಹನದಲ್ಲಿದ್ದರು. ಈ ನಡುವೆ ‘ಬೈಟ್ಸ್‌’ ಪಡೆದುಕೊಳ್ಳುವ ವಿಚಾರವಾಗಿ ಎಎನ್‌ಐ ಪತ್ರಕರ್ತ ಹಾಗೂ ಪಿಟಿಐ ಪತ್ರಕರ್ತೆಯ ನಡುವೆ ವಾಗ್ವಾದ ನಡೆದಿದೆ.

ಈ ವಾಗ್ವಾದದ ಮಧ್ಯೆಯೇ ಎಎನ್‌ಐ ಪತ್ರಕರ್ತ ವರದಿಗಾರ್ತಿಗೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹಲ್ಲೆಯ ವೇಳೆ ಸ್ಥಳದಲ್ಲಿದ್ದ ಡಿ ಕೆ ಸುರೇಶ್ ಅವರ ಬೆಂಬಲಿಗರು ಎಎನ್‌ಐ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವು ವಿಡಿಯೋದಲ್ಲಿದೆ. ಈ ಘಟನೆಯನ್ನು ದೇಶದ ನಾನಾ ಪತ್ರಕರ್ತರು ಖಂಡಿಸಿದ್ದು, ಈ ರೀತಿಯ ವರ್ತನೆ ಸರಿಯಲ್ಲ. ತಪ್ಪು ಯಾರೇ ಮಾಡಿದರೂ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಪತ್ರಕರ್ತೆಯ ಮೇಲಿನ ಹಲ್ಲೆ ಪ್ರಕರಣದ ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವರದಿಗಾರನನ್ನು ಅಮಾನತ್ತು ಮಾಡಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here