ಮಂಗಳೂರು: 2015ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ರಾಹಿಂ ಮುಜಾಂಬಿಲ್ (28) ಎಂಬಾತನನ್ನು ವಿಟ್ಲ ಪೊಲೀಸರು ಪುತ್ತೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ವಶಕ್ಕೆ ಪಡೆದಿರುತ್ತಾರೆ.
ಬಾಯರ್ ಪದವಿನ ಕ್ಯಾಂಪ್ಕೋ ಕಾಲೊನಿ ನಿವಾಸಿಯಾಗಿರುವ ಇಬ್ರಾಹಿಂ ಮುಜಾಂಬಿಲ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಮಾ.27ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿ ವಿಧ್ಯಾ ಮತ್ತು ಸಿಬ್ಬಂದಿಗಳಾದ ಎಎಸ್‌ಐ ಜಯರಾಮ, ಪೊಲೀಸ್ ಕಾನ್ ಸ್ಟೇಬಲ್ ಆಶೋಕ ಹಾಗೂ ಪುತ್ತೂರು ನಗರ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಧಾಕೃಷ್ಣ ರವರ ತಂಡ, ಪುತ್ತೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ. ಆರೋಪಿ ವಿರುದ್ಧ ವಿಟ್ಲ ಠಾಣೆಯಲ್ಲಿ ಎರಡು ಪ್ರಕರಣ, ಕೇರಳದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪುತ್ತೂರು ನಗರ ಠಾಣೆಯಲ್ಲಿ 1 ಪ್ರಕರಣ, ಅಂಧ್ರಪ್ರದೇಶದ ವಿಶಾಖಪಟ್ಟಣ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣ, ಒಟ್ಟು 05 ಪ್ರಕರಣಗಳು ದಾಖಲಾಗಿರುತ್ತದೆ.