ಮಂಗಳೂರು(ಬೆಳ್ತಂಗಡಿ): ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದ ಮೂವರ ಮೃತದೇಹಗಳನ್ನು ಇಂದು (ಮಾ.29) ಬೆಳ್ತಂಗಡಿಗೆ ತರಲಾಗಿದೆ.
ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದೀಕ್ ಯಾನೆ ಇಮ್ಮಿಯಾಝ್ ಎಂಬವರನ್ನು ಕೊಲೆಗೈದು ಕಾರು ಸಹಿತ ಸುಟ್ಟು ಹಾಕಲಾಗಿತ್ತು. ಮಾ.22ರಂದು ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ಸುಟ್ಟು ಕರಕಲಾದ ದೇಹಗಳೊಂದಿಗೆ ಕಾರು ಪತ್ತೆಯಾಗಿತ್ತು. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದಿರುವ ಕಾರಣ ಇದೀಗ ಮೂರು ಮೃತದೇಹಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ. ಕೃತ್ಯ ಬೆಳಕಿಗೆ ಬಂದ ಏಳು ದಿನಗಳ ಬಳಿಕ ಇಂದು ಬೆಳಗ್ಗೆ ಮೃತದೇಹಗಳನ್ನು ಉಜಿರೆಗೆ ತರಲಾಗಿದೆ.
ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹಗಳನ್ನು ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಸಿದ್ದೀಕ್ ಅವರ ಮೃತದೇಹವನ್ನು ಶಿರ್ಲಾಲು ಮಸೀದಿಗೆ ತರಲಾಗಿದೆ. ಅಂತಿಮ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಮಸೀದಿಯ ದಫನ ಭೂಮಿಯಲ್ಲಿ ಮೃತ ದೇಹಗಳನ್ನು ದಫನ ಮಾಡಲಾಯಿತು.