ಮಂಗಳೂರು (ವಿಜಯಪುರ): ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಬದಲಾವಣೆಯಾಗಬೇಕೆಂಬ ಕೂಗು ಏಳುತ್ತದೆ. ನಾಯಕರು, ಕಾರ್ಯಕರ್ತರ ಜತೆ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ನಡೆದುಕೊಂಡ ರೀತಿ ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ತಾಲೂಕಿನ ತೊರವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಎಸ್ ಯಡಿಯೂರಪ್ಪ ಬಿಟ್ಟರೆ ಬಿಜೆಪಿ ಮುಳುಗಿ ಹೋಗುತ್ತೆ ಎಂದುಕೊಂಡಿರಬಹುದು. ನಾವಂತೂ ಯಡಿಯೂರಪ್ಪ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಜೊತೆ ಪಂಚಮಸಾಲಿ ಸಮುದಾಯ ಇಲ್ಲ. ನಮ್ಮ ಸಮುದಾಯಕ್ಕೆ ಬಿ.ಎಸ್.ಯಡಿಯೂರಪ್ಪ ಮೋಸ ಮಾಡಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಅಡ್ಡಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.”ಟಿಕೆಟ್ ಹಂಚಿಕೆಯ ವಿಚಾರವಾಗಿ ಭಿನ್ನಮತ ಯಡಿಯೂರಪ್ಪ ಅವರಿಂದಲೇ ಆಗುತ್ತಿದೆ. ಚಿತ್ರದುರ್ಗದಲ್ಲಿ ಕಾರಜೋಳಗೆ ಕೊಡದಿದ್ದರೆ ಪ್ರಚಾರ ಮಾಡಲ್ಲ ಎಂದಿದ್ದಾರೆ. ಹೀಗಾಗಿ ಯಡಿಯೂರಪ್ಪ ಬ್ಲಾಕ್ಮೇಲ್ ಮಾಡಿ ಕಾರಜೋಳಗೆ ಟಿಕೆಟ್ ಕೊಡಿಸಿದ್ದಾರೆ. ಈ ವಿಚಾರವನ್ನು ಶಾಸಕ ಚಂದ್ರಪ್ಪ ಹೇಳಿದ್ದಾರೆ” ಎಂದರು.
“ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಜತೆ ಒಳ ಒಪ್ಪಂದ ಇದೆಯೋ ಇಲ್ಲವೊ ಗೊತ್ತಿಲ್ಲ. ಸಚಿವೆ ಹೆಬ್ಬಾಳ್ಕರ್ಗೆ ಅನುಕೂಲ ಆಗುವಂತಹ ಕುತಂತ್ರವಿರಬಹುದು. ಅಪ್ಪ ಮಕ್ಕಳಿಗೆ ಕಳಕಳಿ ಇದ್ದರೆ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಕೊಡಬೇಕಿತ್ತು. ಮತ್ತೊಬ್ಬರಿಗೆ ತ್ಯಾಗ ಮಾಡುವ ಕಥೆ ಹೇಳುವ ನೀವು ತ್ಯಾಗ ಮಾಡಿ. ನಮ್ಮಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿಲ್ಲ. ಕೆ.ಎಸ್.ಈಶ್ವರಪ್ಪ ಟಿಕೆಟ್ ಕೇಳಿರುವುದರಲ್ಲಿ ಯಾವ ತಪ್ಪಿಲ್ಲ ಎಂದು ಹೇಳಿದ್ದಾರೆ.