‘ಇಂಡಿಯಾ’ ಅಣಕಿಸಿ ಜಾಹೀರಾತು-ಬಿಜೆಪಿ ವಿರುದ್ಧ ಮಹಿಳಾ ಸಂಘಟನೆಗಳ ಆಕ್ರೋಶ

ಮಂಗಳೂರು(ನವದೆಹಲಿ): ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರನ್ನು ಅಣಕಿಸಿ ಬಿಜೆಪಿ ಬಿಡುಗಡೆ ಮಾಡಿದ ಜಾಹೀರಾತಿಗೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಜಾಹೀರಾತಿನಲ್ಲಿ ಮಹಿಳೆಯನ್ನು ಕೀಳಾಗಿ ಚಿತ್ರೀಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ.

ಜಾಹೀರಾತಿನಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ ಸೇರಿದಂತೆ ಇಂಡಿಯಾ ಮೈತ್ರಿಕೂಟದದ ನಾಯಕರನ್ನು ಹೋಲುವ ಪಾತ್ರಗಳಿದ್ದು, ಮಹಿಳೆಯೊಬ್ಬಳನ್ನು ವಧುವಿನಂತೆ ಸಿಂಗರಿಸಿ ತೋರಿಸಲಾಗಿದೆ. ಆಕೆಯ ‘ವರ’ ಯಾರು ಎಂಬ ಬಗ್ಗೆ ಇಂಡಿಯಾ ಒಕ್ಕೂಟದ ನಾಯಕರು ಜಗಳವಾಡುವ ರೀತಿಯಲ್ಲಿ ಜಾಹೀರಾತಿನಲ್ಲಿ ತೋರಿಸಲಾಗಿದೆ. ನಾಯಕತ್ವದ ಬಗ್ಗೆ ಇಂಡಿಯಾ ಮೈತ್ರಿಕೂಟದಲ್ಲಿ ಸ್ಪಷ್ಟತೆಯಿಲ್ಲ ಎಂಬಂತೆ ಈ ಜಾಹೀರಾತನ್ನು ಚಿತ್ರೀಕರಿಸಲಾಗಿದೆ. ಈ ಜಾಹೀರಾತಿಗೆ ಹಲವು ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಜಾಹೀರಾತನ್ನು ಹಿಂಪಡೆಯುವಂತೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ, ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನ್ನಿ ರಾಜಾ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾ ತಿವಾರಿ, ಆಲ್‌ ಇಂಡಿಯಾ ಕೋ-ಆರ್ಡಿನೇಷನ್‌ ಆಫ್‌ ಡಬ್ಲ್ಯೂ–ಪಿಎಂಎಸ್‌–ಐಜೆಎಮ್‌–ಜಿನ ಪೂನಂ ಕೌಶಿಕ್ ಆಗ್ರಹಿಸಿದ್ದಾರೆ. ‘ಪ್ರಧಾನಿ ಅವರು ಪ್ರತಿಪಾದಿಸಿದ ‘ನಾರಿ ಶಕ್ತಿ’ ಎಂಬ ಮನುವಾದಿ ಪರಿಕಲ್ಪನೆಯು ಈ ಜಾಹೀರಾತಿನ ಮೂಲಕ ತನ್ನ ನಿಜ ಬಣ್ಣವನ್ನು ತೋರಿಸಿದೆ. ಬಿಜೆಪಿಯ ಮಹಿಳಾ ವಿರೋಧಿ ಮುಖವನ್ನು ಬಯಲು ಮಾಡಿದೆ. ಬಿಜೆಪಿಯು ಕ್ಷಮೆಯಾಚಿಸುವುದರ ಜೊತೆಗೆ, ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕೆಂದು’ ಪ್ರಕಟಣೆಯಲ್ಲಿ ತಿಳಿಸಿವೆ.

LEAVE A REPLY

Please enter your comment!
Please enter your name here