ಮಂಗಳೂರು: ಅಘೋಷಿತ ತುರ್ತು ಪರಿಸ್ಥಿತಿಯ ಭೀತಿಯ ನಡುವೆ ನಡೆಯುತ್ತಿರುವ ನಿರ್ಣಾಯಕ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದೊಂದಿಗೆ “ಇಂಡಿಯಾ” ಕೂಟದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಹಾಗೂ ಸಮಾನ ಮನಸ್ಕ ರೈತ, ದಲಿತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆ ಮಂಗಳೂರಿನಲ್ಲಿ ನಡೆಯಿತು.
ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿದರೆ ದೇಶದ ಸಾಂವಿಧಾನ, ಜನಸಾಮಾನ್ಯರು, ದುರ್ಬಲ ವಿಭಾಗಗಳು, ದುಡಿಯುವ ವರ್ಗಗಳು ಎದುರಿಸಬೇಕಾಗುವ ಅಪಾಯಗಳ ಕುರಿತು ಸಭೆ ವಿಸ್ತಾರವಾಗಿ ಚರ್ಚಿಸಿತು. ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮಹಿಂಸೆಯ ಪ್ರಯೋಗಶಾಲೆಯನ್ನಾಗಿಸಿ ಬಿಜೆಪಿ 33 ವರ್ಷಗಳಿಂದ ಸತತ ಗೆಲುವು ಸಾಧಿಸುತ್ತಿರುವುದು, ಈ ಗೆಲುವಿನಿಂದ ಜಿಲ್ಲೆಯ ಜನ ಜೀವನದ ಮೇಲಾಗಿರುವ ನಕಾರಾತ್ಮಕ ಪರಿಣಾಮಗಳು ಕುರಿತೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಈ ಹಿನ್ನಲೆಯಲ್ಲಿ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಂದಾಗಿ ದುಡಿಯಲು, ಜನರ ನಡುವೆ ಪರಿಣಾಮಕಾರಿಯಾಗಿ ಹಂತ ಹಂತದ ಚುನಾವಣಾ ಪ್ರಚಾರ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಮತ್ತಷ್ಟು ಸಮಾನ ಮನಸ್ಕ, ನಾಗರಿಕ ಸಂಘಟನೆಗಳನ್ನು ಜೊತೆಗೂಡಿಸಿ ತಾಲೂಕು, ಹೋಬಳಿ ಮಟ್ಟಗಳಲ್ಲಿ ಚುನಾವಣಾ ಪ್ರಚಾರ, ಜಾಗೃತಿ ಅಭಿಯಾನಗಳನ್ನು ನಡೆಸಲು ಯೋಜನೆ ಸಿದ್ದಪಡಿಸಲಾಯಿತು. ಅದರ ಭಾಗವಾಗಿ ಎಪ್ರಿಲ್ 15 ರಂದು ಮಂಗಳೂರು ನಗರದಲ್ಲಿ ಸಮಾನ ಮನಸ್ಕ ಸಂಘಟನೆಗಳು, ನಾಗರಿಕ ವೇದಿಕೆಗಳು, ಎಡ ಪಕ್ಷಗಳು ಸೇರಿದಂತೆ ಬಿಜೆಪಿ ವಿರೋಧಿ ಜಾತ್ಯಾತೀತ ಶಕ್ತಿಗಳ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಸಿಪಿಐ ಹಿರಿಯ ನಾಯಕ, ಕಾರ್ಮಿಕ ಮುಂದಾಳು ವಿ ಕುಕ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಬಜಾಲ್ ಸಭೆಯನ್ನು ನಿರ್ವಹಿಸಿದರು. ಸಭೆಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಹಲವಾರು ಮುಖಂಡರು ಭಾಗವಹಿಸಿದ್ದರು.