ತೈವಾನ್‌ನಲ್ಲಿ ಪ್ರಬಲ ಭೂಕಂಪ-ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಅಪ್ಪಳಿಸಿದ ಸುನಾಮಿ

ಮಂಗಳೂರು(ತೈವಾನ್‌): ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆ ದಕ್ಷಿಣ ಜಪಾನಿನ ಎರಡು ದ್ವೀಪಗಳಿಗೆ ಸುನಾಮಿಯ ಮೊದಲು ಅಲೆಗಳು ಅಪ್ಪಳಿಸಿವೆ ಎಂದು ಜಪಾನ್ ಸರ್ಕಾರ ತಿಳಿಸಿದೆ. ಎ.3ರಂದು ಮುಂಜಾನೆ ತೈವಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇಡೀ ದ್ವೀಪದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವೀಪದಲ್ಲಿರುವ ಕಟ್ಟಡಗಳು ಕುಸಿದಿವೆ. ಇದಕ್ಕೂ ಮುನ್ನ, ದಕ್ಷಿಣ ಜಪಾನಿನ ಓಕಿನಾವಾ ದ್ವೀಪ ಸಮೂಹಕ್ಕೆ ಜಪಾನ್​ ಹವಾಮಾನ ಸಂಸ್ಥೆಯು ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದೀಗ ಪ್ರಬಲ ಭೂಕಂಪದ ನಂತರ, ಸುನಾಮಿಯ ಮೊದಲ ಅಲೆಗಳು ತನ್ನ ಎರಡು ದಕ್ಷಿಣ ದ್ವೀಪಗಳನ್ನು ಅಪ್ಪಳಿಸಿವೆ ಎಂದು ಜಪಾನ್ ಹೇಳಿದೆ.

ಜಪಾನ್‌ನ ಹವಾಮಾನ ಸಂಸ್ಥೆಯು 3 ಮೀಟರ್, 9.8 ಅಡಿ ವರೆಗಿನ ಸುನಾಮಿಯ ಮುನ್ಸೂಚನೆ ನೀಡಲಾಗಿದೆ. ತೈವಾನ್‌ನ ಭೂಕಂಪ ಮಾನಿಟರಿಂಗ್ ಏಜೆನ್ಸಿಯ ಪ್ರಕಾರ, 7.2 ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕ ಜಿಯೋಲಾಜಿಕಲ್ ಸರ್ವೆ ಮಾಹಿತಿ ಪ್ರಕಾರ, 7.5 ತೀವ್ರತೆಯೆ ಭೂಕಂಪನ ಇದಾಗಿದೆ. ಹುವಾಲಿಯನ್‌ನಲ್ಲಿನ ಕಟ್ಟಡಗಳು ಕುಸಿದಿವೆ. ಸ್ಥಳೀಯ ಕಾಲಮಾನ ಬೆಳಗ್ಗೆ 7.58ಕ್ಕೆ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಹುವಾಲಿಯನ್​ನಲ್ಲಿ ಐದು ಅಂತಸ್ತಿನ ಕಟ್ಟಡವು ತುಂಬಾ ಹಾನಿಗೊಳಗಾಗಿದೆ. ಅದರ ಮೊದಲ ಮಹಡಿ ಕುಸಿದಿದೆ. ಕಟ್ಟಡದ ಉಳಿದ ಭಾಗ 45 ಡಿಗ್ರಿಯಷ್ಟು ವಾಲಿದೆ. ರಾಜಧಾನಿ ತೈಪೆಯಲ್ಲಿರುವ ಹಳೆಯ ಕಟ್ಟಡಗಳು ಮತ್ತು ಕೆಲವು ಹೊಸ ಕಚೇರಿ ಸಂಕೀರ್ಣಗಳಿಗೆ ಹಾನಿಯಾಗಿವೆ. ಹುವಾಲಿಯನ್‌ನ ದಕ್ಷಿಣ – ನೈಋತ್ಯ ಪ್ರದೇಶದಲ್ಲಿ ಸುಮಾರು 18 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಬೆಳಗ್ಗೆ 7.58ಕ್ಕೆ ಭೂಮಿ ನಡುಗಿದೆ. ಸುಮಾರು 35 ಕಿಲೋ ಮೀಟರ್‌ಗಳಷ್ಟು (21 ಮೈಲುಗಳು) ಆಳದಲ್ಲಿ ಭೂಮಿ ಕಂಪಿಸಿದೆ.

23 ಮಿಲಿಯನ್ ಜನರಿರುವ ತೈಪೆಯ ದ್ವೀಪದಾದ್ಯಂತ ಸುರಂಗಮಾರ್ಗ ಹಾಗೂ ರೈಲು ಸೇವೆಯನ್ನು ಬಂದ್​ ಮಾಡಲಾಗಿದೆ. ಆದರೆ, ರಾಜಧಾನಿಯಲ್ಲಿ ಪರಿಸ್ಥಿತಿ ತ್ವರಿತವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಜೊತೆಗೆ ಬೆಳಗಿನ ಜನ ಸಂಚಾರ ಸಾಮಾನ್ಯವಾಗಿರುವುದು ಕಂಡು ಬಂದಿದೆ. ಭೂಕಂಪ ಸಂಭವಿಸಿದ 15 ನಿಮಿಷಗಳ ನಂತರ ಯೋನಾಗುನಿ ದ್ವೀಪದ ಕರಾವಳಿಯಲ್ಲಿ 30 ಸೆಂಟಿಮೀಟರ್ (ಸುಮಾರು 1 ಅಡಿ) ಸುನಾಮಿ ಅಲೆ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಮಿಯಾಕೊ ಮತ್ತು ಯೆಯಾಮಾ ದ್ವೀಪಗಳ ತೀರಕ್ಕೂ ಮತ್ತೆ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು JAMA ಹೇಳಿದೆ. ಜಪಾನ್‌ನ ಸ್ವಯಂ ರಕ್ಷಣಾ ಪಡೆ ಓಕಿನಾವಾ ಪ್ರದೇಶದ ಸುತ್ತ ಸುನಾಮಿ ಪರಿಣಾಮದ ಕುರಿತು ಮಾಹಿತಿಯನ್ನು ಸಂಗ್ರಹಿಸಲು ವಿಮಾನವನ್ನು ಕಳುಹಿಸಿದೆ. ಅಗತ್ಯವಿದ್ದರೆ ಜನರನ್ನು ಸ್ಥಳಾಂತರಿಸಲು ಮತ್ತು ಆಶ್ರಯ ಒದಗಿಸಲು ಸಿದ್ಧತೆ ಮಾಡಲಾಗುತ್ತಿದೆ.

ತೈವಾನ್‌ನ ಭೂಕಂಪ ಮಾನಿಟರಿಂಗ್ ಬ್ಯೂರೋದ ಮುಖ್ಯಸ್ಥ ವು ಚಿಯೆನ್-ಫೂ ಅವರು, ”ಚೀನಾದ ಕರಾವಳಿಯಲ್ಲಿರುವ ತೈವಾನೀಸ್ ನಿಯಂತ್ರಿತ ದ್ವೀಪವಾದ ಕಿನ್‌ಮೆನ್‌ ವ್ಯಾಪ್ತಿಯಲ್ಲಿ ಭೂಕಂಪನದ ಪರಿಣಾಮಗಳನ್ನು ಕಂಡುಬಂದಿದೆ. ಒಂದು ಗಂಟೆಯಲ್ಲಿ ತೈಪೆಯಲ್ಲಿ ಹಲವು ಬಾರಿ ಭೂಕಂಪಗಳು ಸಂಭವಿಸಿವೆ” ಎಂದು ತಿಳಿಸಿದ್ದಾರೆ. ”ಭೂಕಂಪಗಳಲ್ಲಿ ಒಂದು 6.5 ತೀವ್ರತೆ ಮತ್ತು 11.8 ಕಿಲೋಮೀಟರ್ (7 ಮೈಲುಗಳು) ಆಳದಲ್ಲಿದೆ” ಎಂದು USGS ಹೇಳಿದೆ. ”ಹವಾಯಿ ಅಥವಾ ಯುಎಸ್ ಪೆಸಿಫಿಕ್ ಪ್ರಾಂತ್ಯದ ಗುವಾಮ್‌ಗೆ ಯಾವುದೇ ಸುನಾಮಿ ಬೆದರಿಕೆ ಇಲ್ಲ” ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. 1999ರಲ್ಲಿ ಸಂಭವಿಸಿದ ಭೂಕಂಪನವು ತೈವಾನ್‌ನಲ್ಲಿ ವ್ಯಾಪಕ ಹಾನಿಯನ್ನು ಉಂಟುಮಾಡಿತ್ತು. ಪೆಸಿಫಿಕ್ “ರಿಂಗ್ ಆಫ್ ಫೈರ್”ನ ವ್ಯಾಪ್ತಿಯಲ್ಲಿ ತೈವಾನ್ ಬರುತ್ತದೆ. ‘ರಿಂಗ್ ಆಫ್ ಫೈರ್’ ಪೆಸಿಫಿಕ್ ಮಹಾಸಾಗರವನ್ನು ಸುತ್ತುವರೆದಿರುವ ಭೂಕಂಪನ ಸಂಭವಿಸುವ ರೇಖೆಯಾಗಿದೆ. ಈ ರೇಖೆ ಉದ್ದಕ್ಕೂ ಹೆಚ್ಚಿನ ಭೂಕಂಪಗಳು ಸಂಭವಿಸುತ್ತವೆ.

LEAVE A REPLY

Please enter your comment!
Please enter your name here