ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ನಾಮಪತ್ರ-ಐದು ವರ್ಷದಲ್ಲಿ ಶೋಭಾ ಅವರ ಆಸ್ತಿಯಲ್ಲಿ 6 ಕೋಟಿ ರೂ. ಹೆಚ್ಚಳ

ಮಂಗಳೂರು(ಬೆಂಗಳೂರು): ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇಂದು (ಏ.3) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬಳಿ 16.02 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಒಟ್ಟು 16.02 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, ಅದರಲ್ಲಿ ಚರಾಸ್ತಿ 9,23,66,909 ರೂಪಾಯಿ ಹಾಗೂ 6,78,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಮ್ಮ ನಾಪಮತ್ರದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿರುವ ಶೋಭಾ ಕರಂದ್ಲಾಜೆ ಒಟ್ಟು 4.06 ಕೋಟಿ ರೂಪಾಯಿ ಲೋನ್‌ ಪಡೆದಿದ್ದಾರೆ. ಇವರ ಬಳಿ 1,71,000 ರೂಪಾಯಿ ನಗದು ಹಣವಿದ್ದು, ವಾರ್ಷಿಕ ಆದಾಯವು 2022-23ರ ಸಾಲಿನಲ್ಲಿ 24.90 ಲಕ್ಷ ರೂಪಾಯಿ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಶೋಭಾ ಕರಂದ್ಲಾಜೆ ಅವರ ಬಳಿ ಬರೋಬ್ಬರಿ 1 ಕೆಜಿ ಚಿನ್ನದ ಬಿಸ್ಕಟ್ ಇದ್ದು, ಇದು ಸರಿಸುಮಾರು 68.40 ಲಕ್ಷ ರೂಪಾಯಿ ಮೌಲ್ಯವುಳ್ಳದ್ದಾಗಿದೆ. 650‌ ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು ಇವೆ. ಶೋಭಾ ಕರಂದ್ಲಾಜೆ ಅವರ ಆಸ್ತಿ 2019ರ ಲೋಕಸಭಾ ಚುನಾವಣೆ ಎಷ್ಟಿತ್ತು ಎನ್ನುವುದನ್ನು ನೋಡುವುದಾದರೆ, ಅವರು ಕಳೆದ ಲೋಕಸಭೆ ಚುನಾವಣೆ ವೇಳೆ ಒಟ್ಟು ಆಸ್ತಿ 10.48 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು. ಇದರಲ್ಲಿ ಚರಾಸ್ತಿ 7.38 ಕೋಟಿ ರೂ., ಸ್ಥಿರಾಸ್ತಿ 3.10 ಕೋಟಿ ರೂ. ಒಳಗೊಂಡಿದೆ ಎಂದು ಕಳೆದ ಲೋಕಸಭಾ ಚುನಾವಣೆಯ ಅಫಿಡೆವಿಟ್​ನಲ್ಲಿ ಹೇಳಿಕೊಂಡಿದ್ದರು. ಇದೀಗ ಶೋಭಾ ಅವರ ಒಟ್ಟು ಆಸ್ತಿ ಮೌಲ್ಯ 16.02 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರೊಂದಿಗೆ ಐದು ವರ್ಷಗಳಲ್ಲಿ 6 ಕೋಟಿ ರೂ. ಏರಿಕೆಯಾದಂತಾಗಿದೆ.

ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದ್ದು. ಇವುಗಳಲ್ಲಿ ಎರಡು ಕ್ರಿಮಿನಲ್ ಕೇಸ್‌ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.

 

 

LEAVE A REPLY

Please enter your comment!
Please enter your name here