ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ರದ್ದು ಮಾಡುವಂತೆ ಚುನಾವಣಾಧಿಕಾರಿಗೆ ದೂರು

ಮಂಗಳೂರು(ಬೆಂಗಳೂರು): ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಕಣಕ್ಕಿಳಿದಿದ್ದು, ಇಂದು(ಏ.4) ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಜಯನಗರ 4ನೇ ಬ್ಲಾಕಿನ ಮಯ್ಯಾಸ್ ಹೋಟೆಲ್​ನಿಂದ ಭರ್ಜರಿ ರೋಡ್ ಶೋ ಮೂಲಕ ಹೊರಟು ಬಿಬಿಎಂಪಿ ಜಂಟಿ ಆಯುಕ್ತ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಇದೀಗ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆಯನ್ನು ರದ್ದುಗೊಳಿಸುವಂತೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಚುನಾವಣಾಧಿಕಾರಿಗೆ ದೂರು ನೀಡಿದೆ.

ತಮ್ಮ ನಾಮಪತ್ರ ಸಲ್ಲಿಕೆ ರೋಡ್​ ಶೋನಲ್ಲಿ ಭಾಗಿಯಾಗುವಂತೆ ತೇಜಸ್ವಿ ಸೂರ್ಯ ಅವರು ಜೈನ್​ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಒತ್ತಡ ಹಾಕಿದ್ದಾರೆ. ಒಂದು ವೇಳೆ ರ್ಯಾಲಿಗೆ ಬರದಿದ್ದರೆ ಹಾಜರಾತಿ ನೀಡಲ್ಲವೆಂದು ಮೆಸೇಜ್​ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಕೆಯನ್ನು ರದ್ದು ಮಾಡುವಂತೆ ಚುನಾವಣಾಧಿಕಾರಿಗೆ ಎನ್.​​ಎಸ್​​.ಯು.ಐ ದೂರು ನೀಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆಯುವ ಮೆರವಣಿಗೆಯಲ್ಲಿ ಜೈನ್ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತೇಜಸ್ವಿ ಸೂರ್ಯ ತಮ್ಮ ಆಪ್ತರಿಂದ ಸೂಚನೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತನ್ನ ಪಟಾಲಂ ಮೂಲಕ ಸೂಚನೆ ನೀಡಿರುವ ತೇಜಸ್ವಿ ಸೂರ್ಯ ವಿರುದ್ಧ ರಾಜ್ಯ ಚುನಾವಣಾಧಿಕಾರಿ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು. ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಭಾಗವಹಿಸುವಂತೆ ಬೆದರಿಕೆ ಹಾಕುತ್ತಿರುವುದು ಚುನಾವಣಾ ನಿಯಮಗಳಿಗೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ ಎಂದು ಆಗ್ರಹಿಸಿದೆ. ಹಾಗೇ ಟಿ ಶರ್ಟ್ ಹಂಚಿಕೆ ವಿರುದ್ಧವೂ ಕ್ರಮ ಜರುಗಿಸಿ ಪಾರದರ್ಶಕ ಚುನಾವಣೆಗೆ ಪಕ್ಷಪಾತವಿಲ್ಲದ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದೆ ನೀತಿ ಸಂಹಿತೆಗೆ ವಿರುದ್ಧವಾಗಿ ನಗರತ್ ಪೇಟೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗ ಯಾವುದೇ ಕಠಿಣ ಕ್ರಮ ಜರುಗಿಸದಿರುವುದು ಜನರಲ್ಲಿ ಆಯೋಗದ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ ಎಂದು ಆರೋಪಿಸಿದೆ. ಈ ಮೂಲಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈಗ ಸಂಚಲನ ಸೃಷ್ಟಿಯಾಗಿದೆ. ಅಲ್ಲದೆ ಹಾಲಿ ಸಂಸದ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here