2 ಪ್ರತ್ಯೇಕ ಕೊಲೆ ಪ್ರಕರಣದ ಆರೋಪ ಸಾಬೀತು-ಏ.16ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು: ಉಳ್ಳಾಲ ಮತ್ತು ಮೆಲ್ಕಾರ್‌ನಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಎ.16ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

2015ರ ಆ.5ರಂದು ರಾತ್ರಿ 4-5 ಮುಸ್ಲಿಂ ಸಮುದಾಯದ ಯುವಕರು ಬಂಟ್ವಾಳ ತಾಲೂಕಿನ ಕೊಳ್ನಾಡ್ ಗ್ರಾಮದ ಆಲಬೆಯಲ್ಲಿ ವಿಜೇತ್ ಕುಮಾರ್ ಮತ್ತು ಅಭಿ ಯಾನೆ ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನಸ್ತಾಪಗೊಂಡಿದ್ದ ಆರೋಪಿಗಳು ಮುಸ್ಲಿಂ ಯುವಕರನ್ನು ಹತ್ಯೆ ಮಾಡಲು ಸಂಚು ನಡೆಸಿದ್ದರು. ಅದರಂತೆ 2015ರ ಆ.6ರಂದು ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸೀರ್ ಅವರು ಮೆಲ್ಕಾರ್‌ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾದಲ್ಲಿ ಬರುತ್ತಿದ್ದಾಗ ಆರೋಪಿಗಳಾದ ವಿಜೇತ್ ಕುಮಾರ್, ಕಿರಣ್, ಅನೀಶ್ ಆಲಿಯಾಸ್ ಧನು, ಅಭಿ ಯಾನೆ ಅಭಿಜಿತ್ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ರಾತ್ರಿ ಸುಮಾರು 10:45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು.

ಇದರಿಂದ ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸಿರ್ ಗಾಯಗೊಂಡಿದ್ದರು. ಮುಹಮ್ಮದ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇನ್‌ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿದಾರರನ್ನು ವಿಚಾರಣೆ ನಡೆಸಿ 40 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಎಚ್.ಎಸ್. ಆರೋಪಿಗಳು ದೋಷಿಗಳೆಂದು ಸೋಮವಾರ(ಎ.8) ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ. ಸರಕಾರದ ಪರವಾಗಿ ಶೇಖರ ಶೆಟ್ಟಿ ವಾದ ಮಂಡಿಸಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದರು.

2016ರ ಎಪ್ರಿಲ್‌ 12ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಣದ ರಾಜೇಶ್ ಕೋಟ್ಯಾನ್ ಯಾನೆ ರಾಜ (44)  ಮೀನುಗಾರಿಕೆಗೆಂದು ಕೋಟೆಪುರ ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ ಅನಂತರ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಮುಹಮ್ಮದ್ ಆಸಿಫ್ ಯಾನೆ ಆಚಿ, ಮುಹಮ್ಮದ್ ಸುಹೈಲ್ ಯಾನೆ ಸುಹೈಲ್, ಅಬ್ದುಲ್ ಮುತಾಲಿಫ್ ಯಾನೆ ಮುತ್ತು, ಅಬ್ದುಲ್ ಅಸ್ವೀರ್ ಯಾನೆ ಅಚ್ಚು ಮತ್ತು ಅಪ್ರಾಪ್ತ ಇಬ್ಬರು ಬಾಲಕರು ಪ್ರಕರಣದ ಆರೋಪಿಗಳಾಗಿದ್ದರು. ಉಳ್ಳಾಲ ಠಾಣೆಯ ನಿರೀಕ್ಷಕ ಅಶೋಕ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಮಹಾಬಲೇಶ್ ಶೆಟ್ಟಿ ಮತ್ತು ತಂಡದವರು ಘಟನಾ ಸ್ಥಳ ತಪಾಸಣೆ ನಡೆಸಿ ತಪಾಸಣಾ ವರದಿ ಮತ್ತು ಶವಪರೀಕ್ಷಾ ವರದಿ ಸಲ್ಲಿಸಿದ್ದರು. ಇಬ್ಬರು ಬಾಲಕರ ಹೊರತು ಇತರ ಆರೋಪಿಗಳ ವಿಚಾರಣೆ ನಡೆದಿದ್ದು, ಅವರ ಮೇಲಿನ ಆರೋಪ ಸಾಬೀತಾಗಿದೆ.

ಒಟ್ಟು 28 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ 78 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ನಾಲ್ವರು ಆರೋಪಿಗಳು ದೋಷಿತರೆಂದು ಸೋಮವಾರ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ.

LEAVE A REPLY

Please enter your comment!
Please enter your name here