ಎ.16 ಕ್ಕೆ ಪುತ್ತೂರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್

ಮಂಗಳೂರು(ಪುತ್ತೂರು): ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಎ.16ರಂದು ಪುತ್ತೂರಿಗೆ ಆಗಮಿಸಲಿದ್ದು ಕಿಲ್ಲೆ ಮೈದಾನದಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿರುವ ನಾಯಕರು ಆ ಬಳಿಕ ಕಿಲ್ಲೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ‌ ಭಾಗವಹಿಸಲಿದ್ದು ಸಂಜೆ 5 ಗಂಟೆಗೆ ನಿರ್ಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ‌ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಸಮಾವೇಶವನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನಿಂದ ಕಿಲ್ಲೆ ಮೈದಾನದವರೆಗೆ ಸಿಎಂ ಮತ್ತು ಡಿಸಿಎಂ ಅವರಿಂದ ರೋಡ್ ಶೋ ನಡೆಸುವ ಆಲೋಚನೆ ಇತ್ತಾದರೂ ಪುತ್ತೂರು ಜಾತ್ರೋತ್ಸವದ ಹಿನ್ನೆಲೆಯಲ್ಲಿ ಜನದಟ್ಟನೆ ಮತ್ತು ವಾಹನ ದಟ್ಟನೆಯನ್ನು ಗಮನದಲ್ಲಿಟ್ಟುಕೊಂಡು ರೋಡ್ ಶೋ ಮಾಡುವುದನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ‌ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.‌ರಾಜಾರಾಂ ಕೆ ಬಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಡಿಸಿಸಿ ಕಾರ್ಯದರ್ಶಿ ಮುರಳೀಧರ್ ರೈ ಮಟಂತಬೆಟ್ಟು, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜೋಕಿಂ ಡಿಸೋಜಾ, ಪ್ರಮುಖರಾದ ಕುಂಬ್ರ ದುರ್ಗಾ ಪ್ರಸಾದ್ ರೈ, ಎ ಕೆ ಜಯರಾಂ ರೈ,ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಭೂ ನ್ಯಾಯ ಮಂಡಳಿ ಸದಸ್ಯ ಕೆ ಪಿ ಆಳ್ವಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here