ಮಂಗಳೂರು(ನವದೆಹಲಿ): ಇರಾನ್ ಹಾಗೂ ಇಸ್ರೇಲ್ ಮಧ್ಯೆ ಸಂಬಂಧ ತೀರಾ ಹದಗೆಟ್ಟಿರುವುದರಿಂದ ಉಭಯ ರಾಷ್ಟ್ರಗಳ ಮಧ್ಯೆ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಈ ರಾಷ್ಟ್ರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಎಚ್ಚರಿಕೆಯಿಂದ ಇರಲು ಸಲಹೆ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, “ಇರಾನ್ ಹಾಗೂ ಇಸ್ರೇಲ್ ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆಯ ಖಾತ್ರಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಹೊರಗೆ ಸುತ್ತಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು” ಎಂದು ತಿಳಿಸಿದೆ.
ಇನ್ನೊಂದೆಡೆ ಇಸ್ರೇಲ್ ಮೇಲೆ ಇರಾನ್ ಬೇಗನೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಲ್ಲದೆ ಯುದ್ಧಕ್ಕೆ ಮುಂದಾಗದಂತೆ ಇರಾನ್‌ಗೆ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ‘ಇಸ್ರೇಲ್‌ನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಯುದ್ಧದಲ್ಲಿ ಇಸ್ರೇಲ್ ದೇಶವನ್ನು ಬೆಂಬಲಿಸುತ್ತೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಯಶ ಕಾಣುವುದಿಲ್ಲ’ ಎಂದು ಅವರು ಹೇಳಿದ್ದಾರೆ.