ಮಂಗಳೂರು(ಹಾಸನ): ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ, ಹುಲೆಮಕ್ಕಿ ಗ್ರಾಮದಲ್ಲಿ ನಡೆದಿದೆ. ಮಹಿಳೆ ಸೇರಿ ಇಬ್ಬರನ್ನು ಸೊಂಡಲಿನಿಂದ ಕಾಡಾನೆ ಎತ್ತಿ ಬಿಸಾಡಿದೆ. ಮೂಡಿಗೆರೆ ಭಾಗದಿಂದ ಬಂದಿರುವ 2 ಕಾಡಾನೆಗಳು ಮಾದೇಗೌಡರ ಕಾಫಿ ತೋಟಕ್ಕೆ ನುಗ್ಗಿದ್ದು, ಪುಂಡಾಟ ಮಾಡಲಾಗುತ್ತಿದೆ. ಹಮೀದ್ ಎಂಬವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದ 15 ಕಾರ್ಮಿಕರ ಮೇಲೆ ಏಕಾಏಕಿ ದಾಳಿ ಮಾಡಿದೆ.
ಗಣೇಶ್ ಎಂಬುವರನ್ನು ಸೊಂಡಲಿನಿಂದ ಎಸೆದು ತುಳಿದಿದ್ದು, ಮಹಿಳೆ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರ್ಎಫ್ಓ ಶಿಲ್ಪಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಒಂದೆಡೆ ಕಾಡಾನೆಗಳು ಗುಂಪು ಗುಂಪಾಗಿ ಅಲೆಯುತ್ತಾ ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿದ್ದರೆ, ಮತ್ತೊಂದೆಡೆ ಒಂಟಿಸಲಗ ಪುಂಡಾಟ ಮೆರೆಯುತ್ತಿದೆ. ಹಾಡು ಹಗಲಿನಲ್ಲಿ ಊರು ಮನೆ ಕೇರಿ ಎಂದು ಲೆಕ್ಕಿಸದೆ ಜನರ ಮೇಲೆರಗುತ್ತಿರುವ ಪುಂಡಾನೆಗಳು ಜನರ ಜೀವಕ್ಕೆ ಸಂಚಕಾರ ತರುತ್ತಿದ್ದು ಅರಣ್ಯ ಇಲಾಖೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.