ಮಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮಕ್ಕಳ ಪೇಯವಾಗಿ ಗುರುತಿಸಿಕೊಂಡಿದ್ದ ಕ್ಯಾಡ್‌ಬರಿ ಕಂಪನಿಯ ಬೋರ್ನ್‌ವಿಟಾವನ್ನು ‘ಹೆಲ್ತ್ ಡ್ರಿಂಕ್ಸ್’ ಪಟ್ಟಿಯಿಂದ ತೆಗೆದು ಹಾಕುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಈ ಸೂಚನೆ ನೀಡಿದ್ದು, ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೋರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ‘ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ತೆಗೆದು ಹಾಕುವಂತೆ ನಿರ್ದೇಶಿಸಿದೆ. ಎನ್‌ಸಿಪಿಸಿಆರ್‌ನ ತನಿಖೆಯಲ್ಲಿ ಬೋರ್ನ್‌ವಿಟಾದಲ್ಲಿ ನಿಯಮಗಳಿಗಿಂತ ಹೆಚ್ಚು ಸಕ್ಕರೆ ಮಟ್ಟವನ್ನು ಹೊಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ಕಂಡುಹಿಡಿದಿದೆ. ಈ ಹಿಂದೆ, ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾದ ಮತ್ತು ಪವರ್ ಸಪ್ಲಿಮೆಂಟ್‌ಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ‘ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್’ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಡೈರಿ ಆಧಾರಿತ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಲೇಬಲ್ ಮಾಡುವುದರ ವಿರುದ್ಧ ಇ-ಕಾಮರ್ಸ್ ಪೋರ್ಟಲ್‌ಗಳಿಗೆ ಸೂಚನೆ ನೀಡಿತ್ತು. ಯೂಟ್ಯೂಬರ್ ಒಬ್ಬ ತನ್ನ ವೀಡಿಯೊದಲ್ಲಿ ಪೌಡರ್ ಸಪ್ಲಿಮೆಂಟ್ ಕುರಿತು ವಿಡಿಯೋ ಮಾಡಿದಾಗ ಬೋರ್ನ್‌ವಿಟಾದ ‘ಅನಾರೋಗ್ಯಕರ’ ಸ್ವಭಾವದ ಬಗ್ಗೆ ವಿವಾದವು ಮೊದಲು ಹುಟ್ಟಿಕೊಂಡಿತ್ತು. ಆತ ತಾನು ನಡೆಸಿದ ಲ್ಯಾಬ್ ಟೆಸ್ಟ್‌ನಲ್ಲಿ ಬೋರ್ನ್ ವಿಟಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಇದೆ ಎಂದು ತಿಳಿಸಿದ್ದ. ಅಲ್ಲದೆ, ಅದರಲ್ಲಿರುವ ಅತಿಯಾದ ಸಕ್ಕರೆ, ಕೋಕೋ ಮತ್ತು ಹಾನಿಕಾರಕ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಮಕ್ಕಳಲ್ಲಿ ಗಂಭೀರವಾದ ಆರೋಗ್ಯದ ಅಪಾಯಗಳಿಗೆ ಕಾರಣವಾಗಬಹುದು ಎಂದು ಆರೋಪಿಸಿದ್ದನು. ಈ ವಿಡಿಯೋ ವ್ಯಾಪಕ ವೈರಲ್ ಆಗಿ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಹೆಚ್ಚಾಗಿತ್ತು. ಇದೀಗ ಬೋರ್ನ್‌ವಿಟಾ ಪೇಯವನ್ನು ‘ಆರೋಗ್ಯ ಪಾನೀಯ’ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.