ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಕೇಂದ್ರದಲ್ಲಿ ಪ್ರತ್ಯೇಕ ಸಾಗರೋತ್ತರ ಸಚಿವಾಲಯ ಮರು ಸ್ಥಾಪನೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರ್ಪಡೆಗೊಳಿಸಿದೆ ಎಂದು ಅನಿವಾಸಿ ಭಾರತೀಯರ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೆಂದ್ರದಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಾಗರೋತ್ತರ ಸಚಿವಾಲಯವಿತ್ತು. ಇದರಿಂದ ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸಲು ಸುಲಭ ಸಾಧ್ಯವಾಗುತ್ತಿತ್ತು. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಸಾಗರೋತ್ತರ ಸಚಿವಾಲಯವನ್ನು ವಿದೇಶಾಂಗ ಸಚಿವಾಲಯದಲ್ಲಿ ವಿಲೀನ ಮಾಡಲಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಸಿದ್ದರಾಮಯ್ಯ ಸರಕಾರ ಇದ್ದಾಗ ನನ್ನನ್ನು ಅನಿವಾಸಿ ಭಾರತೀಯರ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು. ಆದರೆ ಬಳಿಕ ಬಂದ ಬಿಜೆಪಿ ಸರಕಾರ ಈ ಅನಿವಾಸಿ ಭಾರತೀಯರ ಉಪಾಧ್ಯಕ್ಷ ಹುದ್ದೆಗೆ ಯಾರನ್ನೂ ನೇಮಕ ಮಾಡಿರಲಿಲ್ಲ. ಇದರಿಂದಾಗಿ ಕೊರೊನಾ ಸಂದರ್ಭದಲ್ಲಿ ಕರ್ನಾಟಕದ ಅನಿವಾಸಿ ಭಾರತೀಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಅನೇಕ ಮಂದಿಗೆ ನೆರವು ಒದಗಿಸಿದ್ದೇನೆ. ಇದೀಗ ಸಿದ್ಧರಾಮಯ್ಯ ಸರಕಾರ ಮತ್ತೆ ಅಧಿಕಾರದಲ್ಲಿದ್ದು, ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಅನಿವಾಸಿ ಭಾರತೀಯರ ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಮರು ನೇಮಕ ಮಾಡಿದೆ. ಹೀಗೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನಿವಾಸಿ ಭಾರತೀಯರನ್ನು ನಿರ್ಲಕ್ಷ್ಯ ಮಾಡಿವೆ ಎಂದು ಆರೋಪಿಸಿದರು. ಕೊರೊನಾ ಸಂದರ್ಭದಲ್ಲಿ ನಾನು ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸಿ, ಒದಗಿಸಿದ ಸೇವೆಗಾಗಿ ಜನಾರ್ದನ ಪೂಜಾರಿ ಅವರು ನನ್ನನ್ನು ಕೊರೊನಾ ವಾರಿಯರ್ ಎಂಬುದಾಗಿ ಸನ್ಮಾನಿಸಿದ್ದರು ಎಂದು ನೆನಪಿಸಿದ ಡಾ. ಆರತಿ ಕೃಷ್ಣ ಅವರು ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.