ಮಂಗಳೂರು(ಮುಂಬೈ): ಜಾಗತಿಕ ಆರ್ಥಿಕ ಮತ್ತು ಇರಾನ್ ಇಸ್ರೇಲ್ ನಡುವಿನ ಯುದ್ಧ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ (ಏ.15) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ ಸರಿಸುಮಾರು 500 ಅಂಕಗಳಷ್ಟು ಕುಸಿತ ಕಂಡಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 470.94 ಅಂಕಗಳಷ್ಟು ಇಳಿಕೆಯಾಗಿದ್ದು, 73,773.96 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 137.60 ಅಂಕ ಕುಸಿತ ಕಂಡಿದ್ದು, 22,381.80 ಅಂಕಗಳಲ್ಲಿ ವಹಿವಾಟು ನಡೆದಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಮಧ್ಯ ಏಷ್ಯಾದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಇದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಕುಸಿತದ ಪರಿಣಾಮ ಎಲ್ಲಾ ಲಿಸ್ಟೆಡ್ ಕಂಪನಿಗಳ ಬಿಎಸ್ ಇ ಇಳಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿಯಿಂದ 394.68 ಲಕ್ಷ ಕೋಟಿ ರೂಪಾಯಿಗೆ ಕುಸಿತ ಕಂಡಿದ್ದು, ಹೂಡಿಕೆದಾರರು ಆರು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಂತಾಗಿದೆ. ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿತ್ತು.