ಮಂಗಳೂರು(ಬಾಲಸೋರ್): ಕಳೆದ 35 ವರ್ಷದಿಂದ ಊಟವನ್ನೇ ಮಾಡದೇ, ಕೇವಲ ದ್ರವಾಹಾರ ಸೇವನೆ ಮಾಡಿ ಆರೋಗ್ಯಯುತ ಜೀವನ ನಡೆಸುತ್ತಿರುವ ಅಪರೂಪದ ಮಹಿಳೆಯೊಬ್ಬರು ಈಗ ಸುದ್ದಿಯಾಗಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬ್ಲಾಕ್ನ ಅಶಿಮಿಲಾ ಗ್ರಾಮದ ಮಹಿಳೆ ಶಾಂತಿಲತಾ ಜೆನಾ (47) ಈ ರೀತಿಯ ಜೀವನಶೈಲಿ ನಡೆಸುತ್ತಿರುವ ಮಹಿಳೆ. ಇವರು ಕಳೆದ 35 ವರ್ಷಗಳಿಂದ ಕೇವಲ ಜ್ಯೂಸ್ ಮತ್ತು ಟೀ ಸೇವನೆ ಮಾಡುತ್ತ ಬದುಕಿದ್ದಾರೆ. ಈ ರೀತಿಯ ಜೀವನದಿಂದ ಅವರ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲ. ಜತೆಗೆ ಆರೋಗ್ಯಯುತವಾಗಿ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ.
ಶಾಂತಿಲತಾ ತನಗೆ 12 ವಯಸ್ಸಿದಾಗಲೇ ಊಟವನ್ನು ತ್ಯಜಿಸಿದರಂತೆ. ಅವರ ತಾಯಿ ಊಟವನ್ನು ತಿನ್ನಿಸಿದರೂ ಅದು ವಾಂತಿಯಾಗುತ್ತಿತ್ತು. ಆಗ ಹೆಚ್ಚು ನೀರು ಕುಡಿದು ಇರುತ್ತಿದ್ದರಂತೆ. ಬಾಲಕಿಯ ಈ ಸ್ಥಿತಿ ಕಂಡು ಆತಂಕಗೊಂಡ ಪೋಷಕರು ವೈದ್ಯರನ್ನು ಸಂಪರ್ಕಿಸಿದರು. ಆಗ ಶಾಂತಿಲತಾರನ್ನು ಪರೀಕ್ಷಿಸಿದ ವೈದ್ಯರು, ಆಕೆಗೆ ಊಟದ ಬದಲಾಗಿ ಆಕೆಯ ದೇಹಕ್ಕೆ ಹೊಂದುವ ದ್ರವಾಹಾರವನ್ನು ಮಾತ್ರ ನೀಡುವಂತೆ ಸಲಹೆ ನೀಡಿದರು. ಅಂದಿನಿಂದ ಶಾಂತಿಲತಾ ಆಹಾರವನ್ನೇ ತ್ಯಜಿಸಿ ಜೀವನ ಸಾಗಿಸುತ್ತಿದ್ದಾರೆ. ಪರೀಕ್ಷೆ ಮಾಡೋಣ ಎಂದು ಅಪ್ಪಿತಪ್ಪಿ ಆಹಾರ ಸೇವಿಸಿದರೆ, ತಕ್ಷಣಕ್ಕೆ ವಾಂತಿಯಾಗುತ್ತದೆ ಎನ್ನುತ್ತಾರೆ ಶಾಂತಿಲತಾ. ಬಾಲ್ಯದಲ್ಲಿ ವೈದ್ಯರ ಭೇಟಿ ಬಳಿಕ ಮನೆಗೆ ಮರಳಿದ ಶಾಂತಿಲತಾ ಅಂದಿನಿಂದ ಶನಿದೇವನ ಆಶ್ರಯವನ್ನು ಪಡೆದರು. ಆಹಾರ ಸೇವನೆ ನಿಲ್ಲಿಸಿದ ಬಳಿಕ ಶನಿದೇವನ ಆರಾಧನೆಯಲ್ಲಿ ತೊಡಗಿದ್ದಾರೆ.
ಈ ಘಟನೆ ಕುರಿತು ವಿಶ್ಲೇಷಣೆ ನಡೆಸಿದ ವೈದ್ಯರು, ವ್ಯಕ್ತಿಯೊಬ್ಬ ನಿಯಮಿತ ಸಮಯದವರೆಗೆ ಮಾತ್ರ ಈ ರೀತಿ ನೀರು ಕುಡಿದು ಜೀವನ ಸಾಗಿಸಬಹುದು. ಹಲವಾರು ವರ್ಷಗಳ ಕಾಲ ನೀರು ಸೇವನೆಯಿಂದ ಮಾತ್ರವೇ ಆರೋಗ್ಯವಾಗಿರಲು ಸಾಧ್ಯವಿಲ್ಲ. ಟೀ ಸೇವನೆಯಿಂದ ಆಕೆಯ ದೇಹದಲ್ಲಿ ಹಾಲು, ಸಕ್ಕರೆಯ ಪೋಷಕಾಂಶ ಮತ್ತು ಜ್ಯೂಸ್ ಸೇವನೆಯಿಂದ ಹಣ್ಣಿನ ಅಂಶಗಳು ಆಕೆಗೆ ಲಭ್ಯವಾಗುತ್ತವೆ. ಇದರಿಂದ ಆಕೆ ಜೀವಂತವಾಗಿದ್ದಾಳೆ. ಆಕೆ ಕೇವಲ ದ್ರವಾಹಾರ ಸೇವನೆಯಿಂದ ಆರೋಗ್ಯವಾಗಿ ಜೀವನ ನಡೆಸಿದರೂ, ಆಕೆ ದೇಹ ಅಗತ್ಯ ದೈಹಿಕ ಬೆಳವಣಿಗೆ ಕಾಣುವುದಿಲ್ಲ ಎಂದಿದ್ದಾರೆ. ಇನ್ನು, ಈ ಕುರಿತು ಮಾತನಾಡಿರುವ ಶಾಂತಿಲತಾ ಮತ್ತು ಅವರ ಕುಟುಂಬಸ್ಥರು ಹೇಳುವುದೇ ಬೇರೆ. ಇಷ್ಟು ವರ್ಷ ಕೇವಲ ದ್ರವಾಹಾರದಿಂದ ಉತ್ತಮ ಜೀವನ ಸಾಗಿಸುತ್ತಿರುವುದಕ್ಕೆ ಶನಿದೇವನ ಆಶೀರ್ವಾದ ಕಾರಣ ಎಂದಿದ್ದಾರೆ.