ನಾರಾಯಣ ಗುರುಗಳಿಗೆ ಮಾಲಾರ್ಪಣೆ ಬಿಜೆಪಿ ಚುನಾವಣಾ ಗಿಮಿಕ್ – ವಿನಯ ಕುಮಾರ್ ಸೊರಕೆ

ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ, ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ಹಾರಾರ್ಪಣೆ ಮಾಡಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ(ಎ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಚುನಾವಣಾ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಸುಳ್ಳು ಭರವಸೆ ನೀಡಿದಂತೆ, ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆಯೊಂದಿಗೆ ರೋಡ್ ಶೋ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಜುಮ್ಲಾದಂತೆ ಎಂದು ಲೇವಡಿ ಮಾಡಿದರು. ಎರಡು ವರ್ಷಗಳ ಹಿಂದೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ ಅವಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಶಾಲಾ ಪಠ್ಯ ಪುಸ್ತಕದಿಂದ ನಾರಾಯಣ ಗುರು ಮಾತ್ರವಲ್ಲದೆ, ಬಸವಣ್ಣ, ಕುವೆಂಪು ಮೊದಲಾದ ಮಹನೀಯರ ಪಠ್ಯವನ್ನು ಕೈಬಿಟ್ಟವರು ಈಗ ಚುನಾವಣೆಯ ಸಂದರ್ಭದಲ್ಲಿ ಇಂತಹ ಗಿಮಿಕ್ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ದಾಖಲೆ ನಿರ್ಮಿಸಲಿದೆ. ದ.ಕ. ಮತ್ತು ಉಡುಪಿ ಕ್ಷೇತ್ರವನ್ನು ಕೂಡಾ ಕೈವಶ ಮಾಡಿಕೊಳ್ಳುವ ಭರವಸೆ ವ್ಯಕ್ತವಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಮಂಡ್ಯ ಮತ್ತು ಕೋಲಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಜಿಲ್ಲೆಯ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮ ಜಾತ್ರೆಯ ಕಾರಣ ಮುಂದೂಡಲಾಗಿದ್ದು, ಶೀಘ್ರದಲ್ಲೇ ಆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ನಿರುದ್ಯೋಗ 2013ರಲ್ಲಿ ಶೇ.4.9ರಷ್ಟಿದ್ದು, 10 ವರ್ಷದಲ್ಲಿ ಅದು ಶೇ.8ಕ್ಕೆ ಏರಿಕೆಯಾಗಿದೆ. ನಿರುದ್ಯೋಗದಲ್ಲಿ ನಮ್ಮ ದೇಶ 125ರಲ್ಲಿ 111ನೇ ಸ್ಥಾನದಲ್ಲಿದೆ. 1948ರಲ್ಲಿ ಶೇ.80ರಷ್ಟಿದ್ದ ಬಡತನ 2014ರ ವೇಳೆಗೆ ಶೇ.14.8ಕ್ಕೆ ತಲುಪಿತ್ತು. ಬಡತನದಲ್ಲಿ ಪ್ರಸಕ್ತ 10 ವರ್ಷಗಳ ಆಡಳಿತದಲ್ಲಿ 126 ರಾಷ್ಟ್ರಗಳಲ್ಲಿ ನಾವು 110ನೇ ಸ್ಥಾನದಲ್ಲಿದ್ದೇವೆ. 19 ಕೋಟಿ ಜನ ಒಂದು ಹೊತ್ತಿನ ಊಟಕ್ಕಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಶಿಕ್ಷಣದಲ್ಲಿ 1951ರಲ್ಲಿ ಶೇ.18.32 ಇದ್ದು, 2014ಕ್ಕೆ ಶೇ. 74ಕ್ಕೆ ಏರಿಕೆಯಾಗಿತ್ತು. ಆದರೆ ಆ ಪರಿಸ್ಥಿತಿ ಇನ್ನೂ ಹಾಗೇ ಇದ್ದು ಮುಂದುವರಿಕೆ ಆಗಿಲ್ಲ. 1948-49ರಲ್ಲಿ 300 ಇದ್ದ ಅಣೆಕಟ್ಟುಗಳ ಸಂಖ್ಯೆ 2014ಕ್ಕೆ 4000ಕ್ಕೆ ತಲುಪಿತ್ತು. ದೇಶದ ಸಾಲ 70 ವರ್ಷಗಳಲ್ಲಿ 55.87 ಲಕ್ಷ ಕೋಟಿ ರೂ.ಗಳಾಗಿದ್ದರೆ, ಕಳೆದ 10 ವರ್ಷಗಳಲ್ಲಿ ಅದು ರೂ.128 ಲಕ್ಷ ಕೋಟಿಯಾಗಿದೆ. ಈ ರೀತಿ ರಾಷ್ಟ್ರಮಟ್ಟದಲ್ಲಿ ಅನೇಕ ವ್ಯತ್ಯಾಸಗಳನ್ನು ಕಾಣುವ ಜತೆಗೆ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕುವಂತದ್ದು. ಐಟಿ, ಇಡಿ, ಸಿಬಿಐಗಳನ್ನು ಬಳಸಿಕೊಂಡು ವಿರೋಧ ಪಕ್ಷವನ್ನು ದಮನ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಸೊರಕೆ ಆರೋಪಿಸಿದರು.

ಒಂದು ರಾಷ್ಟ್ರ, ಒಂದು ಭಾಷೆ, ಒಂದು ಚುನಾವಣೆ, ಒಂದು ಧರ್ಮ ಇವೆಲ್ಲವೂ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಸಂವಿಧಾನ ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರೂ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಆಡಳಿತದ ಈ ವ್ಯವಸ್ಥೆಯಲ್ಲಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದಿದೆ. ಚುನಾವಣೆಯ ವೇಳೆ ಅದನ್ನು ಯಾರೂ ನಂಬಿರಲಿಲ್ಲ. ಉಡುಪಿಯ ಜಿಲ್ಲಾ ನಾಯಕರೊಬ್ಬರು ಈ ಗ್ಯಾರಂಟಿ ಜಾರಿಯಾದರೆ ನಾನು ತಲೆ ಬೋಳಿಸಿ ವಿಧಾನ ಸೌಧದ ಎದುರು ಕೂರುವುದಾಗಿ ಹೇಳಿದ್ದರು. ಗ್ಯಾರಂಟಿ ಅನುಷ್ಠಾನದ ಬಳಿಕ ಕೊಪ್ಪದ ಶಾಸಕರ ಎಲ್ಲಾ ಬ್ರಾಂಡ್‌ಗಳ ಬ್ಲೇಡ್‌ಗಳನ್ನು ಅವರಿಗೆ ಕಳುಹಿಸಲಾಗಿತ್ತು. ಶೇ. 10ರಿಂದ 15ರಷ್ಟು ಬಿಜೆಪಿ ಮತಗಳು ನಮಗೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಬೇಟಿ ಪಡಾವೊ ಬೇಟಿ ಬಚಾವೊ ಎಂದು ಘೋಷಣೆ ಕೂಗುತ್ತಾರೆ. ಆದರೆ ಶಾಲೆಯಲ್ಲಿ ಹೆಣ್ಣು ಮಕ್ಕಳ ಶಾಲಾ ಶುಲ್ಕ ಕಟ್ಟುವುದು ಕಾಂಗ್ರೆಸ್, ಅವರಿಗೆ ಸಮವಸ್ತ್ರ ಪುಸ್ತಕ ಕೊಡುವುದು ಕಾಂಗ್ರೆಸ್, ಫ್ಲೆಕ್ಸ್ ಮಾತ್ರ ಅವರದ್ದು. ಸ್ವಚ್ಛ ಭಾರತ್‌ನಲ್ಲಿ ಪೊರಕೆ ನಮ್ಮದು, ಗುಡಿಸುವುದು ನಾವು, ಕಸ ಎತ್ತುವುದು ನಾವು‌, ಪ್ರಚಾರ ಅವರದ್ದು. ನೀಡಿರುವ ಯಾವುದೇ ಆಶ್ವಾಸನೆಯನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ ಜನ ಮೋದಿಯವರ ಗ್ಯಾರಂಟಿಯನ್ನು ನಂಬುತ್ತಾರೆಯೋ, ಕಾಂಗ್ರೆಸ್‌ನ ಗ್ಯಾರಂಟಿ ನಂಬುತ್ತಾರೆಯೋ ಎಂಬುದು ನೋಡಬೇಕಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದರು.

ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಅವರ ಮೀಟಿಂಗ್ ನಡೆಯುವ ಸಂದರ್ಭ ಧೈರ್ಯ ಇದ್ದಲ್ಲಿ ಎಷ್ಟು ಜನರಿಗೆ ಗ್ಯಾರಂಟಿ ದೊರಕಿದೆ ಎಂದು ಕೈ ಎತ್ತಲು ಹೇಳಲಿ ಎಂದು ಸವಾಲು ಹಾಕಿದ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಟಾನ ಆಗಿದೆ ಎಂಬುದು ಆಗ ಬಿಜೆಪಿಗೆ ಅರಿವಾಗಲಿದೆ. ಕಾಂಗ್ರೆಸ್‌ಗೆ ಪೂರಕ ವಾತಾವರಣ ರಾಜ್ಯದಲ್ಲಿ ಕಂಡು ಬಂದಿದೆ ಎಂದರು. ಜಿಲ್ಲೆಯಲ್ಲಿ ಪ್ರತಿ ಬಾರಿ ಸ್ಪರ್ಧಿಸುವ ಎಸ್‌ಡಿಪಿಐಯವರು ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿನಯ ಕುಮಾರ್ ಸೊರಕೆ, ರಾಜ್ಯ ಮಟ್ಟದಲ್ಲಿ ಅವರ ಬೆಂಬಲದ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಶಾಲೆಟ್ ಪಿಂಟೋ, ಕೃಷ್ಣಪ್ಪ, ನೀರಜ್ ಪಾಲ್, ಟಿ.ಎಂ. ಶಹೀದ್, ಯೋಗೀಶ್ ಕುಮಾರ್, ಟಿ.ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಜಿಲ್ಲೆಯ 42 ಮಂದಿ ಜೆಡಿಎಸ್‌ ಪದಾಧಿಕಾರಿಗಳು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮತ್ತು ವಿನಯ್‌ ಕುಮಾರ್‌ ಸೊರಕೆ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here