ಅಯೋಧ್ಯೆಯಲ್ಲಿ ಇಂದು ಮೊದಲ ರಾಮನವಮಿ ಸಂಭ್ರಮ-ಬಾಲರಾಮನಿಗೆ ಸೂರ್ಯ ತಿಲಕದ ಮೆರುಗು

ಮಂಗಳೂರು(ಅಯೋಧ್ಯೆ): ಇಂದು ರಾಮನವಮಿ. ಶ್ರೀರಾಮನವಮಿ ಪ್ರಯುಕ್ತ ಬಾಲರಾಮನ ಕಣ್ತುಂಬಿಕೊಳ್ಳಲು ದೇಶದ ಹಲವೆಡೆಯಿಂದ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸಿದ್ದಾರೆ.

ರಾಮಮಂದಿರ ನಿರ್ಮಾಣಗೊಂಡ ನಂತರ ಆಚರಿಸಲಾಗುತ್ತಿರುವ ಮೊದಲ ರಾಮನವಮಿಗೆ ಅಯೋಧ್ಯೆ ಸಿಂಗಾರಗೊಂಡಿದೆ. ರಾಮನವಮಿ ವಿಶೇಷವಾಗಿ ದೇವರಾಹ ಹಂಸ ಬಾಬಾ ಟ್ರಸ್ಟ್ ರಾಮಮಂದಿರಕ್ಕೆ 1,11,111 ಕೆ.ಜಿ ಲಡ್ಡನ್ನು ಅರ್ಪಿಸಿದೆ. ಮುಂಜಾನೆ 3:30ರಿಂದ ರಾತ್ರಿ 11 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಯೋಧ್ಯೆ ಬೀದಿಗಳನ್ನು ಎಲ್‌ಇಡಿ ಬಲ್ಬ್‌ಗಳಿಂದ ಶೃಂಗರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಅಯೋಧ್ಯೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಮನವಿಯಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯ ಮೇಲೆ ಬರುವಂತೆ ಮಂದಿರವನ್ನು ವಿನ್ಯಾಸಗೊಳಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣ ಬಾಲರಾಮನ ಹಣೆಗೆ ಮುತ್ತಿಕ್ಕಲಿದೆ. 75 ಮಿ.ಮೀ. ಗಾತ್ರದ ಈ ಸೂರ್ಯ ತಿಲಕ ಸುಮಾರು ನಾಲ್ಕು ನಿಮಿಷಗಳ ಕಾಲ ಇರಲಿದ್ದು, ನಂತರ ಸರಿಯಲಿದೆ ಎಂದು ಟ್ರಸ್ಟ್ ತಿಳಿಸಿದೆ. ರಾಮನವಮಿ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಏಪ್ರಿಲ್ 15ರಿಂದ 18ರವರೆಗೆ ವಿವಿಐಪಿ ಮತ್ತು ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here