ಸಾಯಿ ಮಂದಿರದ ಎದುರು ಮತಯಾಚನೆ-ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

ಮಂಗಳೂರು: ಉರ್ವ ಚೆಲಿಂಬಿಯ ಓರ್ಡಿ ಸಾಯಿಬಾಬಾ ದೇವಸ್ಥಾನದ ಬಳಿ ಮತ ಯಾಚನೆ ಮಾಡುವ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂದಿರದ ಮೊಕ್ತಸರ ವಿಶ್ವಾಸ್‌ ದಾಸ್ ನಡುವೆ ಗುರುವಾರ(ಎ.18) ಸಂಜೆ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಬೆಂಬಲಿಗರು ಹಾಗೂ ಸಾಯಿ ಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ನಡುವೆ ಪರಸ್ಪರ ತಳ್ಳಾಟ ನಡೆದಿದೆ.

ಸಾಯಿ ಬಾಬಾ ಮಂದಿರದಲ್ಲಿ ರಾಮನಮಮಿ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದವ್ಯಾಸ ಕಾಮತ್ ಅವರು ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿಗೆ ಮತ ಯಾಚಿಸಲು ತೆರಳಿದ್ದರು. ಆಗ ವಿಶ್ವಾಸದಾಸ್, `ಮಂದಿರದ ಬಳಿ ನೀವು ಮತ ಯಾಚಿಸುವುದು ಬೇಡ. ನಾವೂ ಯಾವ ಪಕ್ಷಕ್ಕೂ ಮತ ಯಾಚಿಸಲು ಅವಕಾಶ ನೀಡಿಲ್ಲ. ನೀವು ಬೇಕಿದ್ದರೆ ಬೇರೆ ಕಡೆ ಮತ ಕೇಳಿ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರದಲ್ಲಿ ವಿಶ್ವಾಸ್ ದಾಸ್ `ಕಾರ್ಯಕ್ರಮ ಮಾಡಿ, ನೀವು ಮಾಡಿದ ಕೆಲಸದ ಆಧಾರದಲ್ಲಿ ಮತ ಯಾಚಿಸಿ, ಮನೆ ಮನೆಗೆ ಹೋಗಿ ಮತ ಕೇಳಿ. ನಮ್ಮ ಅಭ್ಯಂತರ ಇಲ್ಲ, ಆದರೆ ದೇವಸ್ಥಾನದ ಜಾಗದಲ್ಲಿ ಮತ ಯಾಚಿಸಲು ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ, ‘ಇದು ನಿಮ್ಮ ರಸ್ತೆಯಾ? ಇದಕ್ಕೆ ಡಾಂಬರು ಹಾಕಿಸಿದ್ದು ನೀವಾ? ನಾವು ನರೇಂದ್ರ ಮೋದಿಯವರು ಸಾಗಿದ ಮಾರ್ಗದಲ್ಲಿ ಮತ ಕೇಳುತ್ತೇವೆ, ರಸ್ತೆಯಲ್ಲಿ ನಿಂತು ಯಾರು ಬೇಕಾದರೂ ಮತ ಕೇಳಬಹುದು’ ಎಂದು ವೇದವ್ಯಾಸ್ ಹೇಳಿದ್ದಾರೆ. ಅಪ್ಪರಲ್ಲಿ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ, ‘ಜಗಳ ಬೇಡ’ ಎಂದು ಎರಡೂ ಕಡೆಯವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

ದೇವಸ್ಥಾನದ ಮೊಕ್ತಸರರಾದ ವಿಶ್ವಾಸದಾಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಅವರು ಮುಕ್ತೇಸರರಾಗಿರುವ ಸಾಯಿ ಮಂದಿರದ ಬಳಿ ಮಾತಿನ ಚಕಮಕಿ ನಡೆಯುತ್ತಿರುವ ಮಾಹಿತಿ ತಿಳಿದು ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಶಶಿಧರ ಹೆಗ್ಡೆ ಮೊದಲಾದವರು ಬೆಂಬಲಿಗರೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಾತಿನ ಚಕಮಕಿ ತಾರಕಕ್ಕೇರಿದಾಗ ಎರಡೂ ಗುಂಪುಗಳ ನಡುವೆ ತಳ್ಳಾಟ ನಡೆದಿದೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

LEAVE A REPLY

Please enter your comment!
Please enter your name here