ಮಂಗಳೂರು: ಯಾವುದೇ ಪ್ರಾರ್ಥನಾ ಮಂದಿರದಲ್ಲಿ ಮತಯಾಚನೆ ಮಾಡುವಂತಿಲ್ಲ. ರಾಜಕೀಯ ಲಾಭಕ್ಕೆ ಹಿಂದೂಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದೇ ಹಿಂದೂಗಳನ್ನು ಅನಾಥರನ್ನಾಗಿ ಮಾಡಲಾಗುತ್ತದೆ ಎಂದು ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಹೇಳಿದ್ದಾರೆ.
ಎ.18ರಂದು ಚಿಲಿಂಬಿಯ ಸತ್ಯಸಾಯಿ ಮಂದಿರದ ಬಳಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಂಗಳೂರು ದ.ಕ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನನ್ನ ಕ್ಷೇತ್ರದ ಶಾಸಕರು ಎಂದು ಹೇಳಲು ನಾಚಿಕೆಯಾಗುತ್ತಿದೆ. ನನ್ನ ಕ್ಷೇತ್ರದ ಶಾಸಕರ ಬಗ್ಗೆ ನನಗೆ ಹೆಮ್ಮೆಯಾಗಬೇಕಿತ್ತು. ಸಿಕ್ಕಿದಲ್ಲಿ ಹೋಗಿ ಗಲಾಟೆ, ಗೂಂಡಾ ರೀತಿ ವರ್ತನೆ ಇದು ನಮ್ಮೂರಿಗೆ ಕಳಂಕ ತರುವ ವಿಚಾರ. ಇನ್ನಾದ್ರೂ ಪರಮಾತ್ಮ ಅವರಿಗೆ ಒಳ್ಳೆ ಬುದ್ಧಿ ಕೊಡಲಿ, ಒಳ್ಳೆ ಕೆಲಸ ಮಾಡಲಿ. ಕೆಲಸ ಮಾಡಿ ಜನರ ನಡುವೆ ಪ್ರೀತಿ, ವಿಶ್ವಾಸ ಗಳಿಸಲಿ. ಅದು ಬಿಟ್ಟು ಜನರ ನಡುವೆ ಸಂಘರ್ಷ ಏರ್ಪಡಿಸಿ ಇಲ್ಲಿನ ಶಾಸಕರು ಎಂದು ಹೇಳಲು ನಾಚಿಕೆ ಪಡುವಂತಹ ಕೆಲಸ ಅವರು ಮಾಡಬಾರದು ಎಂದು ಹೇಳಿದರು.
ಪ್ರಧಾನಮಂತ್ರಿಯನ್ನು ಮಂಗಳೂರಿಗೆ ಸ್ವಾಗತಿಸುತ್ತೇನೆ ಎಂದು ಹೇಳಿದ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಗೌರವಾನ್ವಿತ ಪ್ರಧಾನಮಂತ್ರಿಯಾಗಿ ಅವರನ್ನು ದ.ಕ ಕ್ಕೆ ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಒಬ್ಬ ರಾಜಕೀಯ ಪಕ್ಷದ ಮುಖಂಡನಾಗಿ ಅವರಿಲ್ಲಿ ಬಂದಿದ್ದು ಇಲ್ಲಿನ ಜನರ ಪ್ರಶ್ನೆಗಳಿಗೆ ಉತ್ತರ ಕೊಡದೆ ಹೋಗಿರುವುದು ಆ ಪಕ್ಷದ ವಿಫಲತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.