ಮಂಗಳೂರು(ಬೆಂಗಳೂರು): ಹುಬ್ಬಳ್ಳಿ ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ್ ಅವರ ಬರ್ಬರ ಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ.
ಚಾಕುವಿನಿಂದ 10 ಬಾರಿ ಇರಿದು ಕೊಂದ ಆರೋಪಿ ಫಯಾಜ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ನೇಹಾ ಅನ್ನೋ ಟ್ರೆಂಡಿಂಗ್ ಆಗಿದ್ದು ಕೊಲೆಗಾರನ ಮೇಲೆ ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಅಲ್ಲದೇ ಅವನನ್ನು ನೇಣಿಗೆ ಹಾಕಬೇಕು. ಇಲ್ಲ ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇಂದು ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಇನ್ನು ಮಗನ ಈ ಪೈಶಾಚಿಕ ಕೃತ್ಯಕ್ಕೆ ತಂದೆ ಪ್ರತಿಕ್ರಿಯಿಸಿದ್ದು, ಈ ಕೊಲೆಗೆ ಕಾರಣವಾದ ಆರೋಪಿ ಫಯಾಜ್ ಗೆ ಶಿಕ್ಷೆ ಆಗ್ಬೇಕು ಎಂದು ಹೇಳಿದ್ದಾರೆ.
ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಕಣ್ಣೀರು ಹಾಕುತ್ತಲೇ ಮನವಿ ಮಾಡಿದ ಬಾಬಾ ಸಾಹೇಬ್, ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕು ಎಂದು ಕೈ ಮುಗಿದು ಮನವಿ ಮಾಡಿದ್ದಾರೆ.