ಮಂಗಳೂರು: ಉಳ್ಳಾಲದಲ್ಲಿ 2016ರಲ್ಲಿ ನಡೆದಿದ್ದ ಕೋಮುಗಲಭೆಯ ಸಂದರ್ಭದಲ್ಲಿ ರಾಜೇಶ್ ಕೋಟ್ಯಾನ್ ಅಲಿಯಾಸ್ ರಾಜ (44) ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ₹ 25 ಸಾವಿರ ದಂಡ ವಿಧಿಸಿದೆ.
ಉಳ್ಳಾಲ ಆಲದ ಮರದ ಬಳಿಯ ನಿವಾಸಿ, ಚಾಲಕ ಮೊಹಮ್ಮದ್ ಆಸಿಫ್ ಅಲಿಯಾಸ್ ಆಚಿ (23), ಉಳ್ಳಾಲ ಕೋಡಿಯ ನಿವಾಸಿ ಲೋಡರ್ ಮೊಹಮ್ಮದ್ ಸುಹೈಲ್ ಅಲಿಯಾಸ್ ಸುಹೈಲ್ (20), ಕೋಡಿ ಮಸೀದಿಯ ಬಳಿಯ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಮುತಾಲಿಕ್ ಅಲಿಯಾಸ್ ಮುತ್ತು (20), ಉಳ್ಳಾಲ ಬಸ್ತಿಪಡ್ಪು ಮಂಜಿಲ್ ನಿವಾಸಿ, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಅಸ್ವೀರ್ ಅಲಿಯಾಸ್ ಅಚ್ಚು (19) ಶಿಕ್ಷೆಗೆ ಒಳಗಾದ ಅಪರಾಧಿಗಳು.
ಅಪರಾಧಿಗಳು ₹ 25 ಸಾವಿರ ದಂಡ ಕಟ್ಟಲು ವಿಫಲವಾದರೆ ಮತ್ತೆ 1 ವರ್ಷ ಸಜೆ ಅನುಭವಿಸಬೇಕು. ಸಾಕ್ಷ್ಯನಾಶಕ್ಕಾಗಿ ಒಂದು ವರ್ಷ ಸಜೆ ಮತ್ತು ತಲಾ ₹ 50 ಸಾವಿರ ದಂಡ ತೆರಬೇಕು. ಈ ದಂಡ ತೆರಲು ವಿಫಲವಾದರೆ ಮತ್ತೆ ತಿಂಗಳ ಸಜೆ ಅನುಭವಿಸಬೇಕು. ಅಕ್ರಮ ಕೂಟ ರಚನೆಗಾಗಿ 6 ತಿಂಗಳ ಸಜೆ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಕ್ಕೆ 1 ವರ್ಷ ಸಜೆ, ಗಲಭೆಗೆ ಸಂಚು ರೂಪಿಸಿದ್ದಕ್ಕಾಗಿ 1 ವರ್ಷ ಸಜೆ ಅನುಭವಿಸಬೇಕು ಹಾಗೂ ದಂಡದ ಮೊತ್ತ ₹ 1.20 ಲಕ್ಷವನ್ನು ಮೃತ ರಾಜೇಶ್ ಕೋಟ್ಯಾನ್ ಅವರ ಪತ್ನಿ ಸವಿತಾ ಅವರಿಗೆ ನೀಡಬೇಕು ಎಂದೂ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಅವರು ಆದೇಶದಲ್ಲಿ ತಿಳಿಸಿದ್ದಾರೆ. ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಸವಿತಾ ಅವರಿಗೆ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಪರಿಹಾರ ನೀಡಬೇಕು ಎಂದೂ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.
ಉಳ್ಳಾಲ ಗ್ರಾಮದ ಕೋಟೆಪುರದ ಹಳೆಯ ಬರಕಾ ಫ್ಯಾಕ್ಟರಿಯ ಬಳಿಯಲ್ಲಿ 2016ರ ಏ. 12ರಂದು ಮುಂಜಾನೆ ರಾಜೇಶ್ ಕೊಲೆ ನಡೆದಿತ್ತು. ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಕೋಟೆಪುರ ಜೆಟ್ಟಿಯತ್ತ ಮುಂಜಾನೆ 2.30ರ ವೇಳೆ ಒಂಟಿಯಾಗಿ ತೆರಳುತ್ತಿದ್ದ ಅವರನ್ನು ಕೋಟೆಪುರ ರಸ್ತೆ ಪಕ್ಕದ ಗೂಡಂಗಡಿ ಬಳಿ ಕಾಯುತ್ತಿದ್ದ ಅಪರಾಧಿಗಳು ತಡೆದಿದ್ದರು. ಬರಕಾ ಫ್ಯಾಕ್ಟರಿಯಲ್ಲಿ ದಾಸ್ತಾನಿಟ್ಟಿದ್ದ ದೊಣ್ಣೆಗಳನ್ನು ಬಳಸಿ ದಾಳಿ ನಡೆಸಿದ್ದರು. ಮೃತ ವ್ಯಕ್ತಿಯ ಗುರುತು ಸಿಗಬಾರದು ಎಂಬ ಕಾರಣಕ್ಕೆ ಮುಖವನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದರು. ರಾಜೇಶ್ ಅವರ ತಮ್ಮ ಜಗದೀಶ ಕೋಟ್ಯಾನ್ ನೀಡಿದ ದೂರಿನನ್ವಯ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ಅಕ್ರಮ ಕೂಟ ರಚನೆ), ಸೆಕ್ಷನ್ 147 (ಗಲಭೆ ನಡೆಸುವುದು), ಸೆಕ್ಷನ್ 148 (ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ), ಸೆಕ್ಷನ್ 153(2) (ಗಲಭೆಗೆ ಸಂಚು), ಸೆಕ್ಷನ್ 302 (ಕೊಲೆ) , 201 (ಸಾಕ್ಷ್ಯ ನಾಶ) ಹಾಗೂ 149 ಸೆಕ್ಷನ್‌ಗಳಡಿ (ಸಮಾನ ಉದ್ದೇಶದಿಂದ ಅಕ್ರಮ ಕೂಟ ರಚನೆ) ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಘಟನಾ ಸ್ಥಳದಲ್ಲಿ ತನಿಖಾ ತಂಡವು ಸಂಗ್ರಹಿಸಿದ ಬಟ್ಟೆ ಮತ್ತು ಇತರ ಸೊತ್ತುಗಳಲ್ಲಿ ಪತ್ತೆಯಾದ ಡಿ.ಎನ್.ಎ ಮಾದರಿಗಳು ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ವೈದ್ಯಾಧಿಕಾರಿ ಡಾ.ಮಹಾಬಲೇಶ್ ಶೆಟ್ಟಿ ನೇತೃತ್ವದ ತಂಡದವರು ತನಿಖೆಗೆ ನೆರವಾಗಿದ್ದರು. ಸರ್ಕಾರಿ ವಕೀಲರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು. ಒಟ್ಟು 28 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 78 ಪುರಾವೆಗಳನ್ನು ನ್ಯಾಯಾಲಯವು ಪರಿಗಣಿಸಿತ್ತು.