ಮಂಗಳೂರು(ನವದೆಹಲಿ): ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ವಯಸ್ಸಿನ ಮಿತಿ ತೆಗೆದುಹಾಕಿದ್ದು, ಈ ನಿಯಮ 2024ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಹೊಸ ನಿಯಮದ ಪ್ರಕಾರ, ವಯಸ್ಸಿನ ಹೊರತಾಗಿ ಯಾರು ಬೇಕಾದರೂ ಹೊಸ ಆರೋಗ್ಯ ವಿಮೆ ಖರೀದಿಸಲು ಅರ್ಹರಾಗಿರುತ್ತಾರೆ. ಎಲ್ಲಾ ವಯೋಮಾನದ ವಿಮಾದಾರರಿಗೂ ಆರೋಗ್ಯ ವಿಮೆ ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ. ವಿಮಾದಾರರು ವಿಶೇಷವಾಗಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಮತ್ತು ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಿದ ಯಾವುದೇ ಇತರ ಗುಂಪಿಗೆ ಸೇರಿದವರು ಕೂಡಾ ವಿಮೆ ಸೌಲಭ್ಯ ಹೊಂದಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
“ಇದು ಸ್ವಾಗತಾರ್ಹ ಬದಲಾವಣೆ. ಈಗ 65 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆರೋಗ್ಯ ರಕ್ಷಣೆ ಪಡೆಯಲು ಅವಕಾಶ ಸಿಕ್ಕಿದೆ. ಹಿರಿಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವಿಮಾ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಇತ್ತೀಚಿಗೆ ಕ್ಯಾನ್ಸರ್, ಹೃದಯ ಅಥವಾ ಮೂತ್ರಪಿಂಡ ವೈಫಲ್ಯ ಮತ್ತು ಏಡ್ಸ್‌ನಂತಹ ತೀವ್ರ ವೈದ್ಯಕೀಯ ಪರಿಸ್ಥಿತಿಗಳಿರುವ ವ್ಯಕ್ತಿಗಳಿಗೆ ಆರೋಗ್ಯ ವಿಮೆ ಪಾಲಿಸಿಗಳನ್ನು ನೀಡಲು ನಿರಾಕರಿಸುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.