ಮಂಗಳೂರು: ರಾಜ್ಯದಲ್ಲಿ ಬೀಚ್ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಕರಾವಳಿ ತೀರದಲ್ಲೇ ಮೊದಲ ಬಾರಿಗೆ ಎಂಬಂತೆ “ಸ್ಕೈ ಡೈನಿಂಗ್’ ಪಣಂಬೂರು ಬೀಚ್‌ನಲ್ಲಿ ಆರಂಭವಾಗಲಿದೆ. ಇನ್ನುಮುಂದೆ ಮಂಗಳೂರಿನಲ್ಲಿ ಆಕಾಶದೆತ್ತರದಲ್ಲಿ ಕುಳಿತು ಆಹಾರ ಸೇವಿಸಬಹುದು. ತೇಲುವ ಹೋಟೆಲ್, ತೂಗುವ ಹೋಟೆಲ್ ಗಳ ನಡುವೆ ಸ್ಕೈ ಡೈನಿಂಗ್ ಕಡಲ ನಗರಿ ಮಂಗಳೂರಿನಲ್ಲಿ ಸಿದ್ದಗೊಳ್ಳುತ್ತಿದ್ದು ವಿಶೇಷ ಅನುಭವ ನೀಡಲಿದೆ.
ಪಣಂಬೂರು ಬೀಚ್‌ನ ಅಭಿವೃದ್ಧಿಯ ಗುತ್ತಿಗೆ ಕಂಪೆನಿ “ಕದಳೀ ಬೀಚ್ ಟೂರಿಸಂ ಸಂಸ್ಥೆ’ ಈ ಯೋಜನೆಯನ್ನು ರೂಪಿಸಿದೆ. ಮೇ ಮೊದಲ ವಾರದಲ್ಲಿ ಸ್ಕೈ ಡೈನಿಂಗ್ ಕಾರ್ಯಾರಂಭಿಸುವ ಸಾಧ್ಯತೆ ಇದೆ. “ಸ್ಕೈ ಡೈನಿಂಗ್’ ವಿದೇಶದ ವಿವಿಧೆಡೆ ಪ್ರಸಿದ್ಧವಾಗಿದೆ. ಭಾರತದಲ್ಲೂ ಕೆಲವೆಡೆ ಈ ಪರಿಕಲ್ಪನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಂಗಳೂರಿನಲ್ಲೂ ಆರಂಭವಾದರೆ ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ “ಸ್ಕೈ ಡೈನಿಂಗ್’ಗೆ ಸಂಬಂಧಿಸಿ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರ ಪ್ರಧಾನ ಅಂಗವಾಗಿರುವ ಕ್ರೇನ್ ರಚನೆ ಆರಂಭವಾಗಬೇಕಿದೆ. ಅಡುಗೆ ಮನೆಯೂ ನಿರ್ಮಾಣವಾಗಲಿದೆ. ಈ ಕ್ರೇನ್ 120 ಅಡಿಗಳಷ್ಟು ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಒಂದೆಡೆ ಸಮುದ್ರ- ಇನ್ನೊಂದೆಡೆ ಮಂಗಳೂರು ನಗರದ ವಿಹಂಗಮ ದೃಶ್ಯಗಳನ್ನು ಸವಿಯುತ್ತಾ ಆಹಾರ ಸವಿಯಲು ಅವಕಾಶವಿರಲಿದೆ. ಇಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಸ್ಕೈ ಡೈನಿಂಗ್ ಜತೆಗೆ ಸಾಹಸ ಕ್ರೀಡೆ, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್ ಗಳಿಗೆ ಜಿಲ್ಲಾಡಳಿತ – ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪಣಂಬೂರು ಬೀಚ್‌ನಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ “ಸ್ಕೈ ಡೈನಿಂಗ್’ ಕೂಡ ಹೊಸ ಪರಿಕಲ್ಪನೆ.
ಸ್ಕೈ ಡೈನಿಂಗ್ ನಲ್ಲಿ ಒಮ್ಮೆಗೆ 16 ಮಂದಿಗೆ ಸಂಗೀತದ ಜತೆಗೆ ಆಹಾರ ಸವಿಯಲು ಅವಕಾಶವಿದೆ. ಪ್ರತಿಯೊಬ್ಬರಿಗೂ ಸೇಫ್ಟಿ ಬೆಲ್ಟ್ ಅಳವಡಿಕೆ, ಪರಿಚಾರಕರಿಗೆ, ತಾಂತ್ರಿಕ ಸಿಬಂದಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇರಲಿದೆ. ಮೆನು ಆಧರಿಸಿ ಮೊದಲೇ ಆಹಾರ ಕಾದಿರಿಸಬಹುದಾಗಿದ್ದು, ಶೀಘ್ರವೇ ದರ ನಿಗದಿಪಡಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ನೆಲಕ್ಕಿಂತ 120 ಅಡಿಗಳಷ್ಟು ಮೇಲ್ಭಾಗದಲ್ಲಿ ಕುಳಿತು ಊಟ ಸವಿಯುವುದು. ಇದೊಂದು ಸಾಹಸವೂ ಹೌದು. ಗಾಜಿನ ಮಾದರಿಯ ಪಾರದರ್ಶಕ ವಸ್ತು ಮತ್ತು ಕಬ್ಬಿಣದಿಂದ ರಚಿಸಲಾದ ಕ್ಯಾಬಿನ್ ಅನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಇದರಲ್ಲಿ ಟೇಬಲ್, ಚೇರ್ ಸಹಿತ ಎಲ್ಲ ವ್ಯವಸ್ಥೆ ಇರಲಿದೆ. ಸುತ್ತಲಿನ ವಿಹಂಗಮ ದೃಶ್ಯವನ್ನು ನೋಡುತ್ತ ಊಟ, ತಿಂಡಿ ಸವಿಯಬಹುದಾಗಿದ್ದು, ಥ್ರಿಲ್ಲಿಂಗ್ ಅನುಭವ ನೀಡಲಿದೆ.