ಗದಗ್‌ನ ನಾಲ್ವರ ಕೊಲೆ ಪ್ರಕರಣ – 8 ಮಂದಿ ಬಂಧನ – ಮನೆ ಮಗನಿಂದಲೇ ಕೊಲೆಗೆ ಸುಪಾರಿ

ಮಂಗಳೂರು/ ಗದಗ: ಗದಗದಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣ ಸಂಬಂಧ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ಮಾರಾಟ ವಿಚಾರವಾಗಿ ಕಲಹ ಉಂಟಾಗಿ ಮನೆಯ ಮಗನೇ ಕೊಲೆಗೆ ಸುಪಾರಿ ನೀಡಿರುವುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ. ಏಪ್ರಿಲ್​ 19ರಂದು ಬೆಳಗಿನ ಜಾವ ಗದಗ ನಗರದ ದಾಸರ ಗಲ್ಲಿಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿತ್ತು.

ಪ್ರಕರಣದ ಬಗ್ಗೆ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಮೂರು ದಿನಗಳೊಳಗೆ ಗದಗ ಎಸ್​​ಪಿ ‌ಬಿ ಎಸ್ ನೇಮಗೌಡ ನೇತೃತ್ವದ ತನಿಖಾ ತಂಡವು ಪ್ರಕರಣವನ್ನು ಭೇದಿಸಿದೆ. 8 ಜನರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಪ್ರಕಾಶ್ ಬಾಕಳೆ ಪುತ್ರ ವಿನಾಯಕ್ ಬಾಕಳೆ (31) ಪ್ರಮುಖ ಆರೋಪಿಯಾಗಿದ್ದು ಕೊಲೆಗೆ ಸುಪಾರಿ ನೀಡಿದ್ದ. ಇನ್ನುಳಿದಂತೆ, ಗದಗ ನಗರದ ಫೈರೋಜ್ ಖಾಜಿ (29), ಜಿಶಾನ್ ಖಾಜಿ(24), ಮೀರಜ್​ನ ಸಾಹಿಲ್ ಖಾಜಿ(19), ಸೋಹೆಲ್ ಖಾಜಿ(19), ಮೀರಜ್ ಮೂಲದ ಸುಲ್ತಾನ್ ಶೇಖ್(23), ಮಹೇಶ್ ಸಾಳೋಂಕೆ(21) ಹಾಗೂ ವಾಹಿದ್ ಬೇಪಾರಿ(21) ಎಂಬುವರನ್ನು ಬಂಧಿಸಲಾಗಿದೆ ಎಂದು  ತಿಳಿಸಿದ್ದಾರೆ.

ಕೊಲೆ ಮಾಡಲೆಂದು ವಿನಾಯಕ್ ಬಾಕಳೆಯು ಆರೋಪಿ ಫೈರೋಜ್ ಖಾಜಿಗೆ 65 ಲಕ್ಷ ರೂಪಾಯಿಗೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ ಎರಡು ಲಕ್ಷ ರೂಪಾಯಿ ನೀಡಿದ್ದ. ಇತ್ತೀಚೆಗೆ ತಂದೆ ಪ್ರಕಾಶ್ ಬಾಕಳೆ ಹಾಗೂ ಪುತ್ರನ ನಡುವೆ ವ್ಯವಹಾರಿಕವಾಗಿ ವೈಮನಸ್ಸು ಉಂಟಾಗಿತ್ತು. ಅಲ್ಲದೆ, ಮತ್ತೊಬ್ಬ ಮಗನ ಹೆಸರಲ್ಲಿ ಪ್ರಕಾಶ್ ಆಸ್ತಿ ಮಾಡಿದ್ದರು. ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ಪ್ರಕಾಶ್ ಗಮನಕ್ಕೆ ತಾರದೆ ಕೆಲ ಆಸ್ತಿಯನ್ನು ವಿನಾಯಕ್ ಮಾರಾಟ ಮಾಡಿದ್ದ. ಈ ಹಿನ್ನೆಲೆಯಲ್ಲಿ ವಿನಾಯಕ್ ವರ್ತನೆಗೆ ಬೇಸತ್ತು ಪ್ರಕಾಶ್ ಬಾಕಳೆ ಜಗಳವಾಡಿದ್ದ. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ್, ಹೆಂಡತಿ ಸುನಂದಾ, ಪುತ್ರ ಕಾರ್ತಿಕ್​ನನ್ನ ಹತ್ಯೆ ಮಾಡಲು ವಿನಾಯಕ್ ಪ್ಲಾನ್ ಮಾಡಿದ್ದ ಎಂದು ಐಜಿಪಿ ಮಾಹಿತಿ ನೀಡಿದ್ದಾರೆ. ಅದರಂತೆ, ಮೀರಜ್ ಮೂಲದ ಸಾಹಿಲ್ ಸೇರಿ ಐವರ ತಂಡಕ್ಕೆ ಕೊಲೆ ಮಾಡಲು ವಿನಾಯಕ್ ಬಾಕಳೆ ಸುಪಾರಿ ನೀಡಿದ್ದ. ಕೃತ್ಯ ನಡೆದು 72 ಗಂಟೆಯಲ್ಲೇ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೇಧಿಸಿದ್ದಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್​ ಶ್ಲಾಘನೆ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here