ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವುದು ಚೊಂಬು ಮಾತ್ರ-ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ

ಮಂಗಳೂರು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಚುನಾವಣಾ ಪ್ರಚಾರ ಭರದಿಂದ ನಡೆಯುತ್ತಿದೆ. ಅರೋಪ ಪ್ರತ್ಯಾರೋಪಗಳು ತೀವ್ರವಾಗಿವೆ. ಕರ್ನಾಟಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 10 ವರ್ಷಗಳಲ್ಲಿ ನೀಡಿರುವುದು ಖಾಲಿ ಚೊಂಬು ಮಾತ್ರ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದ್ದು, ಮಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಚೊಂಬು ಹಿಡಿದುಕೊಂಡು ಸುದ್ದಿಗೋಷ್ಠಿ ನಡೆಸಿದರು.

ದೇಶದಲ್ಲೀಗ ಇರುವುದು ಎರಡೇ ಮಾದರಿ. ಒಂದು ಕಾಂಗ್ರೆಸ್ಸಿನ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯ ಚೊಂಬು ಮಾದರಿ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಈ ಸಂದರ್ಭದಲ್ಲಿ ತಿಳಿಸಿದರು. ನಾವು ರಾಜ್ಯದ ರೈತರಿಗೆ ಅನುಕೂಲವಾಗಲು ಬರ ಪರಿಹಾರ ಕೇಳಿದೆವು, ಆದರೆ ಮೋದಿಜಿ ನಮಗೆ ಚೊಂಬು ಕೊಟ್ಟರು. 15ನೇ ಹಣಕಾಸು ಆಯೋಗದ 58,000 ಕೋಟಿ ರೂ. ನಾವು ಕೇಳಿದೆವು ,ಆದರೆ ಮೋದಿಜಿ ನಮಗೆ ಚೊಂಬು ಕೊಟ್ಟರು. ರಾಜ್ಯದಿಂದ ನೂರು ರೂಪಾಯಿ ತೆರಿಗೆ ಕಟ್ಟಿದರೆ ನಮಗೆ ಕೇವಲ 13 ರೂ. ಕೊಡುತ್ತಿದ್ದಾರೆ. ಇದರಲ್ಲಿ ಅನ್ಯಾಯ ಆಗಿದೆ ಎಂದರೆ ಮೋದಿಜಿ ನಮಗೆ ಚೊಂಬು ಕೊಟ್ಟರು. ಭದ್ರಾ ಅಣೆಕಟ್ಟಿಗೆ ಅನುದಾನ ಕೇಳಿದವು, ಮೋದಿಜಿ ನಮಗೆ ಚೊಂಬು ಕೊಟ್ಟರು. ಬೆಂಗಳೂರು ಅಭಿವೃದ್ಧಿಗಾಗಿ ಅನುದಾನ ಕೇಳಿದವು, ಮೋದಿಜಿ ನಮಗೆ ಚೊಂಬು ಕೊಟ್ಟರು. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಕೊಡುವುದಾಗಿ ಬಿಜೆಪಿಯ ಆಶ್ವಾಸನೆಯನ್ನೇ ಈಡೇರಿಸಲು ಕೇಳಿ ಕೊಂಡೆವು, ಮೋದಿಜಿ ನಮಗೆ ಚೊಂಬು ಕೊಟ್ಟರು. ಎರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಿದೆವು, ಆದರೆ ಮೋದಿಜಿ ನಮಗೆ ಚೊಂಬು ಕೊಟ್ಟರು ಎಂದು ಟೀಕಾ ಪ್ರಹಾರ ಮಾಡಿದರು.

ನಾವು ಐದೂ ಗ್ಯಾರಂಟಿ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ. ಈಗ ದೇಶದ ಬೇರೆ ಬೇರೆ ರಾಜ್ಯಗಳು ನಮ್ಮನ್ನು ಕಾಪಿ ಮಾಡುತ್ತಿವೆ. ನಮ್ಮ ಗ್ಯಾರಂಟಿಯನ್ನು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಅದರೆ ಈಗ ನಮ್ಮ ಗ್ಯಾರಂಟಿ ಪದವನ್ನು ಪ್ರಧಾನಿಯವರು ಕದ್ದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ರಾಜ್ಯದ ಜನತೆಗೆ ಡಬಲ್ ಧಮಾಕಾ ಸಿಗಲಿದೆ. ರಾಜ್ಯದ ಗ್ಯಾರಂಟಿ ಜತೆಗೆ ಕೇಂದ್ರದ ಗ್ಯಾರಂಟಿಯೂ ಸಿಗಲಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here