ಮಂಗಳೂರು: ಸುಮಾರು 25 ಮಂದಿ ಪುರುಷರು ಮತ್ತು 35 ಮಹಿಳೆಯರು ಜಾತ್ಯಾತೀತ ಜನತಾದಳ ಪಕ್ಷವನ್ನು ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ದ. ಕ .ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲತೀಫ್ ವಳಚ್ಚಿಲ್, ಜಿಲ್ಲಾ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಅಧ್ಯಕ್ಷ ಪ್ರಕಾಶ್ ಗೋಮ್ಸ್, ರಾಜೇಶ್ ಶೆಟ್ಟಿ ಜೆಪಿ., ಜೀವನ್ ಪಿ, ಶರೀಫ್ ಕಂಕನಾಡಿ, ಅಬ್ದುಲ್ಲಾ ಮಂಕಿಸ್ಟ್ಯಾಂಡ್, ಮಹಿಳಾ ಜನತಾದಳದ ಉಪಾಧ್ಯಕ್ಷೆ ಶಾರದಾ ಶೆಟ್ಟಿ ಮತ್ತು ಮಹಿಳಾ ಕಾರ್ಯದರ್ಶಿ ನಿಶಾ ಸೇರಿದಂತೆ 25 ಮಂದಿ ಪುರುಷರು ಮತ್ತು 35 ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ವಿಧಾನಸಭಾ ಸದಸ್ಯ ಐವನ್ ಡಿಸೋಜಾ, ಕಾಂಗ್ರೆಸ್ ನ ದ.ಕ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜೆ ಆರ್ ಲೋಬೊ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮಾಜಿ ಮೇಯರ್ ಕೆ ಅಶ್ರಫ್, ಕಾರ್ಪೊರೇಟರ್ ಮಹಾಬಲ ಮಾರ್ಲ, ನೀರಜ್ ಪಾಲ್, ಶುಭೋದಯ ಆಳ್ವ ಮತ್ತು ಇತರ ಕಾಂಗ್ರೆಸ್ ನಾಯಕರುಗಳು ಶಾಲು ತೊಡಿಸಿ, ಕಾಂಗ್ರೆಸ್ ಧ್ವಜ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ, ಜನತಾದಳ ಮಹಿಳಾ ಘಟಕದ ಮಾಜಿ ಕಾರ್ಯದರ್ಶಿ ನಿಶಾ, ಜನತಾದಳ ಪಕ್ಷವು ಕೋಮುವಾದಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ತಂದ 5 ಗ್ಯಾರಂಟಿಯಿಂದ ರಾಜ್ಯದ ಎಲ್ಲಾ ಮಹಿಳೆಯರು ಖುಷಿಪಟ್ಟು ಖಂಡಿತವಾಗಿಯೂ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.