ಮಂಗಳೂರು: ‘ಸೋಲಿನ ಮುನ್ಸೂಚನೆಯಿಂದ ಹತಾಶರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೀಳು ಅಭಿರುಚಿಯ ಹೇಳಿಕೆ ನೀಡಲು ಶುರುಮಾಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019ರಲ್ಲಿ ಪುಲ್ವಾಮ ದಾಳಿ ಹಾಗೂ ರಾಮಮಂದಿರ ನಿರ್ಮಾಣದ ವಿಚಾರ ಮುಂದಿಟ್ಟು ಮೋದಿ ಪ್ರಚಾರ ನಡೆಸಿದರು. ಈ ಸಲ ತಮ್ಮನ್ನು ಕೆಳಗಿಳಿಸಲು ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಲಾಗಿದೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತಾರೆ, ಕರಿಮಣಿ ಸರಕ್ಕೂ ಕುತ್ತು ಬರಲಿದೆ… ಎಂದೆಲ್ಲ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳುವಾಗ ಅವರೇ ಹೇಳಿರುವ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್’ ಹೇಳಿಕೆ ನೆನಪಿಗೆ ಬರಲಿಲ್ಲವೇ. ಹಿಂದಿನ ಯಾವ ಪ್ರಧಾನಿಯೂ ಇಷ್ಟು ಕೆಳಮಟ್ಟಕ್ಕೆ ಇಳಿದಿಲ್ಲ’ ಎಂದರು. ‘ಈ ಸಲ ರಾಜ್ಯದಲ್ಲಿ ಕಾಂಗ್ರೆಸ್ 28ರಲ್ಲಿ 24 ಸ್ಥಾನಗಳನ್ನು ಗೆಲ್ಲುವುದು ಖಚಿತ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಶೇ 43ರಷ್ಟು ಮತಗಳನ್ನು ಪಡೆದು 135 ಸ್ಥಾನಗಳಲ್ಲಿ ಗೆದ್ದಿತ್ತು. 18 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಸ್ಪಷ್ಟ ಮುನ್ನಡೆ ಪಡೆಯುವಷ್ಟು ಮತ ಪಡೆದಿತ್ತು. ಆಗಿನ್ನೂ ಗ್ಯಾರಂಟಿ ಜಾರಿ ಆಗಿರಲಿಲ್ಲ. ಈಗ ಗ್ಯಾರಂಟಿ ಜಾರಿಗೊಂಡ ಬಳಿಕ ಜನರಿಗೆ ಅನುಕೂಲವಾಗಿದೆ. ಎದುರಾಳಿ ಪಕ್ಷಗಳಿಗೆ ಹೋಗುವ ಶೇ 10ರಿಂದ ಶೇ 15ರಷ್ಟು ಮತಗಳು ನಮಗೆ ಬರಲಿವೆ’ ಎಂದರು.‘ನಿಮಗೇ ಸಂಶಯ ಇರುವ ನಾಲ್ಕು ಸ್ಥಾನಗಳ್ಯಾವುವು ಎಂಬ ಪತ್ರಕರ್ತರ ಪ್ರಶ್ನೆಗೆ, ‘ಉಡುಪಿ– ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಕ್ಷೇತ್ರಗಳು ಅದರಲ್ಲಿ ಸೇರಿಲ್ಲ’ ಎಂದಷ್ಟೇ ಉತ್ತರಿಸಿದರು.‘ದೇಶದಲ್ಲೂ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳು ಸಿಗಲಿವೆ. 400ಕ್ಕಂತ ಹೆಚ್ಚು ಸೀಟು ಬರುವ ಭರವಸೆ ಇರುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಮಾತ್ರ ಗೆದ್ದ ಜೆಡಿಎಸ್ ಜೊತೆ ಹಾಗೂ ಬಿಜೆಪಿ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಕೈಜೋಡಿಸುತ್ತಿರಲಿಲ್ಲ’ ಎಂದರು.‘ಅಬಕಾರಿ ನೀತಿ ಸರಿ ಇಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಚುನಾವಣಾ ಬಾಂಡ್ ಕಾಯ್ದೆ ಸರಿ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಈ ಸಂಬಂಧ ಯಾರನ್ನು ಜೈಲಿಗೆ ಕಳುಹಿಸಬೇಕು’ ಎಂದು ಅವರು ಪ್ರಶ್ನಿಸಿದರು.‘ನಾವು ಹುಟ್ಟುವ ಮುನ್ನವೇ ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ಇತ್ತು. ಗಲ್ಲಿ ಗಲ್ಲಿಯಲ್ಲಿ ರಾಮನ ಭಜನೆ ನಡೆಯುತ್ತಿತ್ತು. ಹಿಂದುತ್ವದ ಬಗ್ಗೆ ನಾವು ಬಿಜೆಪಿಯಿಂದ ಕಲಿಯಬೇಕಿಲ್ಲ. ನಮಗೆ ಕೋಮು ಮುಖವಾಡದ ಹಿಂದುತ್ವ ಬೇಡ’ ಎಂದರು.
‘ದೇವಸ್ಥಾನ ಮತ್ತು ದೇವರ ವಿಗ್ರಹ ನಿರ್ಮಿಸುವ ವಿಶ್ವಕರ್ಮರಿಗೆ ಯಾವ ಸ್ಥಾನ ಮಾನವೂ ಸಿಗದ ಬಗ್ಗೆ ಬಿಜೆಪಿಯ ಕೆ.ಪಿ.ನಂಜುಂಡಿ ವಿಧಾನ ಪರಿಷತ್ತಿನಲ್ಲಿ ಬೇಸರ ತೋಡಿಕೊಂಡಿದ್ದರು. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಎಲ್ಲ ದೇವಸ್ಥಾನಗಳ ಆಡಳಿತ ಸಮಿತಿಗಳಲ್ಲಿ ವಿಶ್ವಕರ್ಮರು ಕಡ್ಡಾಯವಾಗಿ ಸದಸ್ಯರಾಗಿರಬೇಕು ಎಂಬ ತಿದ್ದುಪಡಿ ಮಸೂದೆ ಮಂಡಿಸಿದ್ದರು. ಇದರಿಂದಾಗಿ, ಆ ಸಮುದಾಯದ ಕೆ.ಪಿ.ನಂಜುಂಡಿ ಅವರೂ ಕಾಂಗ್ರೆಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ’ ಎಂದರು. ‘ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ಶೋಭಾ ಕರಂದ್ಲಾಜೆ ಅವರಿಗೆ ಗೋ ಬ್ಯಾಕ್ ಎನ್ನುತ್ತಿದ್ದರು. ಅಲ್ಲಿನ ಜನರು ಈಗ ಜಯಪ್ರಕಾಶ್ ಹೆಗ್ಡೆ ‘ಕಂ ಬ್ಯಾಕ್’ ಎನ್ನುತ್ತಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲೂ ಪಕ್ಷದ ಅಬ್ಯರ್ಥಿ ಆರ್.ಪದ್ಮರಾಜ್ ಬಗ್ಗೆ ಒಲವಿದೆ’ ಎಂದರು. ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ಗೆ ಬಂದರೆ ಸೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಯಾರೇ ಪಕ್ಷಕ್ಕೆ ಬರುವುದಾದರೂ ಸ್ವಾಗತ. ಈ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದರು. ‘ಶಾಸಕರೊಬ್ಬರು ಈ ಚುನಾವಣೆಯನ್ನು ರಾಷ್ಟ್ರ ಪ್ರೇಮಿ ಮತ್ತು ರಾಷ್ಟ್ರದ್ರೋಹಿಗಳ ನಡುವೆ ಚುನಾವಣೆ ಎಂದು ಹೇಳಿಕೆ ನೀಡಿದ್ದಾರೆ. ರಾಷ್ಟ್ರ ದ್ರೋಹಿ ಪಟ್ಟ ಕಟ್ಟುವ ಅಧಿಕಾರವನ್ನು ಅವರಿಗೆ ನೀಡಿದವರು ಯಾರು’ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾಜಿ ಮೇಯರ್ ಮಹಾಬಲ ಮಾರ್ಲಾ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ ಸುಬೋಧ್ ಆಳ್ವ, ನೀರಜ್ ಪಾಲ್, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ, ಯುವ ಕಾಂಗ್ರೆಸ್ ಕಾರ್ಯಧ್ಯಕ್ಷ ಗಿರೀಶ್ ಆಳ್ವ, ಕೆಪಿಸಿಸಿ ಸಂಯೋಜಕ ಲಾರೆನ್ಸ್ ಡಿಸೋಜ, ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.