ಮನೆ ಮನೆಯಲ್ಲೂ ನಗುಮುಖದ ಸ್ವಾಗತ-ವಿಶ್ವಾಸ್‌ದಾಸ್‌

ಮಂಗಳೂರು: ‘ಕಾಂಗ್ರೆಸ್ ಅಭ್ಯರ್ಥಿ ಆರ್‌.ಪದ್ಮರಾಜ್‌ ಪರ ಮತಯಾಚನೆ ವೇಳೆ ನಮಗೆ ಮತದಾರದಿಂದ ನಗುಮೊಗದ ಸ್ವಾಗತ ಸಿಗುತ್ತಿದೆ. ಹಿಂದುಳಿದ ವರ್ಗಗಳ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಲಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷ ವಿಶ್ವಾಸ್‌ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೆಟ್ರೋಲ್, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ದರ ಗಗನಕ್ಕೆ ಏರಿದೆ. ಕೊರೋನಾ ಸಂದರ್ಭದಲ್ಲಂತೂ ತತ್ತರಿಸಿದ್ದ ಹಿಂದುಳಿದ ವರ್ಗಗಳ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದರು. ರಾಜ್ಯ ಸರ್ಕಾರದ ಗ್ಯಾರಂಟಿ ಜಾರಿಯಾದ ಬಳಿಕ ತುಸು ಉಸಿರಾಡುವ ಸ್ಥಿತಿ ತಲುಪಿದ್ದಾರೆ. ಗ್ಯಾರಂಟಿ ಯೋಜನೆಗಳು ಪಕ್ಷದ ಕೈ ಹಿಡಿಯಲಿವೆ’ ಎಂದರು. ‘ಗುರು ಬೆಳದಿಂಗಳು ಟ್ರಸ್ಟ್‌ ಮೂಲಕ ಬಡವರ ಸೇವೆಯಲ್ಲಿ ತೊಡಗಿದ್ದ ಆರ್‌.ಪದ್ಮರಾಜ್‌ ಸ್ಪರ್ಧೆಯಿಂದ ಹಿಂದುಳಿದ ವರ್ಗಗಳಿಗೆ ಶಕ್ತಿ ಬಂದಂತಾಗಿದೆ. ಅವರು ಈ ವರ್ಗದ ಜನರಿಗೆ ನ್ಯಾಯ ದೊರಕಿಸುವ ವಿಶ್ವಾಸ ಇದೆ. ಕಾಂಗ್ರೆಸ್‌ ಪಕ್ಷವು ಈ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಉದಯ ಆಚಾರ್‌, ಮುಖಂಡರಾದ ಶಾಂತಲಾ ಗಟ್ಟಿ, ಶೋಭಾ ರಾಜೇಂದ್ರ, ರವಿರಾಜ್, ರಮಾನಂದ ಪೂಜಾರಿ, ಪ್ರಸಾದ್‌, ಪ್ರಸನ್ನ, ಯೋಗೀಶ್ ಪೂಜಾರಿ, ದಿನೇಶ್‌ ಕುಂಪಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here