ಮಂಗಳೂರು(ಕೇರಳ): ಕೇರಳದ ಜಿಲುಮೋಲ್ ಮರಿಯೆಟ್ ಥಾಮಸ್ ತನಗೆ ಎರಡು ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಳೆ. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದ ಮರಿಯೆಟ್ ಥಾಮಸ್ ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಳು. ಇದೀಗ ಕೈಗಳಿಲ್ಲದಿದ್ದರೂ, ಕಾಲುಗಳನ್ನು ಬಳಸಿ ಕಾರು ಚಲಾಯಿಸಿ ದೇಶದ ಗಮನ ಸೆಳೆದಿದ್ದಾಳೆ. ಇದಲ್ಲದೇ ಎರಡು ಕೈಗಳಿಲ್ಲದೇ ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಮರಿಯೆಟ್ ಥಾಮಸ್, ಇತ್ತೀಚೆಗಷ್ಟೇ ತಾನು ಕಾರು ಚಲಾಯಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾಳೆ. ಮಾರ್ಚ್ 28ರಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಈಗಾಗಲೇ 60ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೆ, 2.5 ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸುವುದರ ಜೊತೆಗೆ ಚಿತ್ರಕಲೆಯಲ್ಲೂ ಸೈ ಎನಿಸಿಕೊಂಡಿರುವ ಈಕೆ ಸಾಕಷ್ಟು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಇದೀಗ ದೇಶದಾದ್ಯಂತ ಖ್ಯಾತಿಯನ್ನು ಪಡೆದಿರುವ ಈಕೆ ದೇಶದ ಅನೇಕ ಸೆಲೆಬ್ರಿಟಿಗಳ ಗಮನಸೆಳೆದಿದ್ದಾಳೆ.