ಪಾಟ್ನಾ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ-6 ಮಂದಿ ಸಾವು

ಮಂಗಳೂರು(ಪಾಟ್ನಾ): ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ಗುರುವಾರ(ಎ.25) ಅಗ್ನಿ ಅವಘಡ ಸಂಭವಿಸಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ. ಪಾಟ್ನಾ ಜಂಕ್ಷನ್​ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಹೋಟೆಲ್​ನಲ್ಲಿ ಅಗ್ನಿ ಅಪಘಾತ ನಡೆದಿದೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.  ಅಗ್ನಿಶಾಮಕ ದಳದ ಡಿಜಿ ಶೋಭಾ ಒಹತ್ಕರ್, ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬೆಂಕಿಯನ್ನು ಹತೋಟಿಗೆ ತಂದಿದ್ದೇವೆ. ಸರಿಯಾದ ತನಿಖೆಯ ಮೂಲಕ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು ಮತ್ತು ಸೂಕ್ತ ಕ್ರಮವನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ. ಪಾಲ್ ಹೋಟೆಲ್‌ನಲ್ಲಿ ಬೆಂಕಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಟ್ನಾ ಸೆಂಟ್ರಲ್ ರೇಂಜ್ ಟಿಎಸ್‌ಪಿ ಸತ್ಯ ಪ್ರಕಾಶ್ ಖಚಿತಪಡಿಸಿದ್ದಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಇದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸುಮಾರು 20 ಮಂದಿ ಚಿಕಿತ್ಸೆಗಾಗಿ ಪಿಎಂಸಿಎಚ್ ಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಆವರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಕ್ಕಪಕ್ಕದ ಹೋಟೆಲ್, ಅಂಗಡಿಗಳ ಜನರು ರಸ್ತೆಗೆ ಬಂದರು. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ಜನರನ್ನು ಹೊರ ಕರೆತಂದಿದ್ದಾರೆ. ಬಲವಾದ ಗಾಳಿಯಿಂದಾಗಿ ಪಾಲ್ ಹೋಟೆಲ್‌ನ ಬಲಭಾಗದಲ್ಲಿರುವ ಎರಡೂ ಹೋಟೆಲ್‌ಗಳು ಬೆಂಕಿಗೆ ಆಹುತಿಯಾಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here