ಬೆಂಗಳೂರಿನಲ್ಲಿ ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ ‘ಪೆಟ್ರೋಲ್ ಅಂಕಲ್’

ಮಂಗಳೂರು(ಬೆಂಗಳೂರು): ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮಧ್ಯೆ, ಬೆಂಗಳೂರಿಲ್ಲೊಬ್ಬರು ವಿಭಿನ್ನವಾಗಿ ಮತದಾನ ಜಾಗೃತಿ ಮೂಡಿಸಿದ್ದಾರೆ. ‘ಪೆಟ್ರೋಲ್ ಅಂಕಲ್’ ಎಂದೇ ಖ್ಯಾತರಾದ ಮೊಹಮ್ಮದ್ ಆರಿಫ್ ಸೇಠ್ ಕೈಯಲ್ಲಿ ಮತದಾನ ಜಾಗೃತಿ ಪ್ಲೆಕಾರ್ಡ್ ಹಿಡಿದು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಗರದಲ್ಲಿ ಮತದಾನಕ್ಕೆ ಮುನ್ನವೇ ಅವರು ವಿಧಾನಸೌಧ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ತಲೆಯ ಮೇಲೆ ಭಿತ್ತಿಪತ್ರ ಹಿಡಿದುಕೊಂಡು ಸಂಚರಿಸಿದರು. ಹಲವಾರು ವಾಹನ ಸವಾರರನ್ನು, ನಡೆದುಕೊಂಡು ಹೋಗುತ್ತಿರುವವರನ್ನು ನಿಲ್ಲಿಸಿ ಅವರೊಂದಿಗೆ ಸಂವಹನ ನಡೆಸಿ ಮತದಾನ ಜಾಗೃತಿ ಮೂಡಿಸಿದರು. ಪ್ಲೆಕಾರ್ಡ್ ಹಿಡಿದುಕೊಂಡು ಓಡಾಡುವ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದೇನೆ. ಈ ಮೂಲಕ ನನ್ನ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದೇನೆ ಎಂದು ಮೊಹಮ್ಮದ್ ಆರಿಫ್ ಸೇಠ್ ಹೇಳಿದ್ದಾರೆ. ‘ಬದಲಾವಣೆಗಾಗಿ ಮತ ಚಲಾಯಿಸಲಿದ್ದೇನೆಯೇ ವಿನಃ ದ್ವೇಷಕ್ಕಲ್ಲ ಎಂಬ ಪ್ಲೆಕಾರ್ಡ್​​​ ಅನ್ನು ಅವರು ಹಿಡಿದುಕೊಂಡಿದ್ದರು.

ಮೊಹಮ್ಮದ್ ಆರಿಫ್ ಸೇಠ್ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ದಶಕಗಳ ಕಾಲ ಪಾದರಕ್ಷೆ ಅಂಗಡಿ ಇಟ್ಟುಕೊಂಡಿದ್ದರು. ಮಾರ್ಗ ಮಧ್ಯೆ ಇಂಧನ ಖಾಲಿಯಾಗಿ ಅಥವಾ ಇನ್ನಿತರ ಕಾರಣಗಳಿಂದ ಬಾಕಿಯಾದ ವಾಹನ ಸವಾರರಿಗೆ ನೆರವಾಗುವ ಸೇವೆಯಲ್ಲಿ ತೊಡಗಿಕೊಂಡಿದ್ದರು. 2008 ರಿಂದಲೂ ಅವರು ಈ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಜನರು ಅವರನ್ನು ‘ಪೆಟ್ರೋಲ್ ಅಂಕಲ್’ ಎಂದೇ ಕರೆಯಲಾರಂಭಿಸಿದ್ದರು. ಸದ್ಯ ಪಾದರಕ್ಷೆ ಅಂಗಡಿಯ ವೃತ್ತಿಯಿಂದ ನಿವೃತ್ತರಾಗಿರುವ ಅವರು ತಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಇತರ ವೇದಿಕೆಗಳ ಮೂಲಕ ಸಾಮಾಜಿಕ ಕಳಕಳಿಯುಳ್ಳ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here