ಮಂಗಳೂರು(ಗುವಾಹತಿ): ಅಸ್ಸಾಂನಲ್ಲಿ ಶುಕ್ರವಾರ(ಎ.26) ದಿಢೀರನೇ ಆರು ರೈಲುಗಳ ಸಂಚಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹೊರಟ ಜನ ಸೇರಿದಂತೆ ನೂರಾರು ಮಂದಿ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡು, ಅತಂತ್ರರಾಗಿದ್ದಾರೆ.
ರಾಜ್ಯದ ಲುಂಡಿಂಗ್ ವಿಭಾಗದ ಜತಿಂಗಾ ಲಾಂಪುರ ಮತ್ತು ಹೊಸ ಹರಂಗಜಾವೊ ನಿಲ್ದಾಣಗಳ ನಡುವೆ ಗೂಡ್ಸ್ ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಆರು ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ನಾರ್ತ್ ಈಸ್ಟ್ ಫ್ರಾಂಟಿಯರ್ ರೈಲ್ವೆ ಪ್ರಕಟಿಸಿದೆ. ಏಳು ರೈಲುಗಳನ್ನು ಅವುಗಳ ನಿಗದಿತ ಗಮ್ಯತಾಣ ತಲುಪುವ ಮೊದಲೇ ರದ್ದುಪಡಿಸಲಾಗಿದೆ. ಮೂರು ರೈಲುಗಳ ಸಮಯ ಬದಲಿಸಲಾಗಿದೆ. ಕರೀಂಗಂಜ್‍ಗೆ ತೆರಳಲು ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಹಲವು ಮಂದಿ ತಮ್ಮ ಸ್ವಂತ ಊರುಗಳಿಗೆ ವಾಪಸ್ಸಾಗಲು ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ಅಸ್ಸಾಂನ ದಿಂಫು, ನಾಗಾಂವ್, ಸಿಲ್ಚೇರ್, ಕರೀಂಗಂಜ್ ಮತ್ತು ದರ್ರಂಗ್ ಉದಾಲ್ಗುರಿ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಆದಾಗ್ಯೂ ಹಲವಾರು ಮಂದಿಗೆ ಕರೀಂಗಂಜ್‍ಗೆ ಮತದಾನಕ್ಕೆ ತೆರಳವುದು ಸಾಧ್ಯವಾಗಿಲ್ಲ. ಈ ಪೈಕಿ ಬಹುತೇಕ ಮುಸ್ಲಿಂ ವಲಸೆ ಕಾರ್ಮಿಕರು ಎನ್ನಲಾಗಿದೆ.