ಮಂಗಳೂರು/ಹಾಸನ: ಹಲವು ವರ್ಷಗಳ ನಂತರ ಗೆಳತಿಯರಿಬ್ಬರು ಪರಸ್ಪರ ಮುಖಾಮುಖಿಯಾದ ಅಪರೂಪದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಗುಳಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ಜಾನಮ್ಮ(94) ಮತ್ತು ಫಾತಿಮಾ(93) ಹಲವು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಪರಸ್ಪರ ಮುಖಾಮಖಿಯಾದ ಇಬ್ಬರು ಸಂತಸದಿಂದ ತಬ್ಬಿಕೊಂಡರು. ಈ ಅಪರೂಪದ ಕ್ಷಣಕ್ಕೆ ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಮತಗಟ್ಟೆಯಲ್ಲಿದ್ದ ಜನರು ಸಾಕ್ಷಿಯಾದರು.
ತಮ್ಮ ಮದುವೆಯ ಬಳಿಕ ಇಬ್ಬರೂ ಗೆಳತಿಯರು ದೂರವಾಗಿದ್ದರು. ಹಲವು ವರ್ಷಗಳಿಂದ ದೂರವಾಗಿದ್ದ ಗೆಳತಿಯರ ಭೇಟಿ ಇಬ್ಬರಿಗೂ ಖುಷಿ ತಂದಿತ್ತು. ಗೆಳೆತನಕ್ಕೆ ಯಾವುದೇ ಧರ್ಮ, ಜಾತಿ, ಮತ, ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಇವರಿಬ್ಬರ ಗೆಳೆತನ ಸಾಕ್ಷಿಯಾಯಿತು. ನಿಷ್ಕಲ್ಮಶ ಪ್ರೀತಿ, ಸ್ನೇಹಕ್ಕೆ ಹತ್ತಿರದಲ್ಲಿದ್ದವರ ಕಣ್ಣುಗಳು ತುಂಬಿ ಬಂದವು.