ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಸಿದ್ಧವಾಗಿರುವ ‘ಗಬ್ಬರ್ ಸಿಂಗ್’ ತುಳು ಚಲನ ಚಿತ್ರವು ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಸಿನಿಪೊಲೀಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಸುರತ್ಕಲ್‌ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರ್ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಬ್ಬರ್ ಸಿಂಗ್’ ವಿಭಿನ್ನ ಕಥೆಯನ್ನು ಒಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಚಿತ್ರ ರೂಪಿಸಲಾಗಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ದೃಶ್ಯಗಳು ಇವೆ. ನಾಯಕ ನಟನಾಗಿ ಶರಣ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ ಎಂದರು.
ಪ್ರದೀಪ್ ನಿರ್ದೇಶನದ ಚಿತ್ರಕ್ಕೆ ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ಮುಖ್ಯ ಪಾತ್ರದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ ಮತ್ತಿತರರು ಇದ್ದಾರೆ. ರವಿ ಸುವರ್ಣ ಛಾಯಾಗ್ರಹಣ, ಪ್ರಜ್ವಲ್ ಸುವರ್ಣ ಸಂಕಲನ, ವೆಂಕಟೇಶ್ ಬೆಂಗಳೂರು ಕಲೆ, ಡೊಲ್ಫಿನ್ ಕೊಳಲಗಿರಿ ಸಂಗೀತ, ಕಾರ್ತಿಕ್ ಮೂಲ್ಕಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭೋಜರಾಜ ವಾಮಂಜೂರು, ಮಧು ಸುರತ್ಕಲ್, ಚಂದ್ರಶೇಖರ ನಾನಿಲ್ ಹಳೆಯಂಗಡಿ, ಶರಣ್ ಶೆಟ್ಟಿ, ವೆನ್ಸಿಟಾ ಉಪಸ್ಥಿತರಿದ್ದರು.