ಮಂಗಳೂರು(ಬೆಂಗಳೂರು): ದೇಶದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಗೋದ್ರೆಜ್ ಸಮೂಹ ಇಬ್ಭಾಗವಾಗಿದೆ. ಷೇರುಗಳನ್ನು ಪುನರ್ ರಚಿಸಲು ಕಂಪನಿ ಮುಂದಾಗಿದ್ದು, ಗೋದ್ರೇಜ್ ಎಂಟರ್‌ಪ್ರೈಸಸ್ ಹಾಗೂ ಗೋದ್ರೇಜ್ ಇಂಡಸ್ಟ್ರೀಸ್ ಎನ್ನುವ ಎರಡು ಪ್ರತ್ಯೇಕ ಕಂಪನಿಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಸಂಸ್ಥೆ ತಿಳಿಸಿದೆ.
ಸಂಬಂಧಪಟ್ಟ ನಿಯಂತ್ರಕ ಅನುಮೋದನೆ ಲಭಿಸಿದ ಬಳಿಕ ಎರಡು ಪ್ರತ್ಯೇಕ ಉದ್ಯಮವಾಗಿ ಕಾರ್ಯನಿರ್ವಹಿಸಲಿದ್ದು, ಉಭಯ ಕಂಪನಿಗಳೂ ಗೋದ್ರೆಜ್ ಬ್ರಾಂಡ್ ಅನ್ನೇ ಬಳಸಲಿವೆ ಎಂದು ತಿಳಿಸಿದೆ. ಅಂತರಿಕ್ಷಯಾನ, ವಾಯುಯಾನ, ರಕ್ಷಣಾ ಮತ್ತು ದ್ರವ ಎಂಜಿನ್‌ಗಳ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗೋದ್ರೆಜ್ ಎಂಟರ್‌ಪ್ರೈಸಸ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಜಮ್ಶೆಡ್ ಗೋದ್ರೆಜ್ ಕಾರ್ಯ ನಿರ್ವಹಿಸಲಿದ್ದಾರೆ. ಅವರ ಸೊಸೆ ನೈರಿಕಾ ಹೋಳ್ಕರ್ ಅವರು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರಲಿದ್ದಾರೆ. 73 ವರ್ಷದ ನಾದಿರ್ ಗೋದ್ರೆಜ್ ಅವರು ಗೋದ್ರೆಜ್ ಇಂಡಸ್ಟ್ರೀಸ್ ಗ್ರೂಪ್‌ನ ಅಧ್ಯಕ್ಷರಾಗಿರಲಿದ್ದಾರೆ. ಗೋದ್ರೆಜ್ ಇಂಡಸ್ಟ್ರೀಸ್, ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್, ಗೋದ್ರೆಜ್ ಪ್ರಾಪರ್ಟೀಸ್ ಮುಂತಾದ ಉದ್ಯಮಗಳು ಜಿಐಜಿಯ ಭಾಗವಾಗಿರಲಿದೆ.