ಪೆನ್‌ ಡ್ರೈವ್‌ ಪ್ರಕರಣ – ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಪ್ರಜ್ವಲ್‌ – ಮಾಹಿತಿ ನೀಡಲು ಸಂತ್ರಸ್ತೆಯರ ಹಿಂದೇಟು 

ಮಂಗಳೂರು(ಬೆಂಗಳೂರು): ತನ್ನ ಮೇಲೆ ಅನೇಕ ಮಹಿಳೆಯರು ದಾಖಲಿಸಿರುವ ಲೈಂಗಿಕ ದೌರ್ಜನ್ಯದ ದೂರಿನ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ  ಮುಂದೆ ಹಾಜರಾಗಲು ಒಂದು ವಾರದ ಕಾಲಾವಕಾಶ ನೀಡುವಂತೆ ಹಾಸನ ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೋರಿದ್ದಾರೆ.

ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ‌ ಇಲ್ಲದ ಕಾರಣ, ಕಾಲಾವಕಾಶ ಕೋರಿ ನಾನು ನನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಪ್ರಜ್ವಲ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ನಿನ್ನೆಯಷ್ಟೇ SIT ತಂಡ ಪ್ರಜ್ವಲ್ ರೇವಣ್ಣ ಮತ್ತು ಆತನ ತಂದೆ ಎಚ್.ಡಿ.ರೇವಣ್ಣ ಇಬ್ಬರಿಗೂ ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ SIT ಡಿವೈಎಸ್ ಪಿಗೆ ಪತ್ರ ಬರೆದಿರುವ ಪ್ರಜ್ವಲ್ ಪರ ವಕೀಲ ಅರುಣ್ ಜಿ. ತನ್ನ ಕಕ್ಷಿದಾರ ಬೆಂಗಳೂರಿನಲ್ಲಿ ಇಲ್ಲದ ಕಾರಣ, ಒಂದು ವಾರದ ಕಾಲಾವಕಾಶ ಒದಗಿಸುವಂತೆ ಕೋರಿದ್ದಾರೆ.

ಇನ್ನೊಂದೆಡೆ ವಿಡಿಯೋಗಳ ಬಗ್ಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ. ನಮಗೆ ತೊಂದರೆ ಕೊಟ್ಟರೆ ಸೂಸೈಡ್ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಎಸ್‌ಐಟಿ ಅಧಿಕಾರಿಗಳು ತನಿಖೆಗಾಗಿ ಸಂತ್ರಸ್ತೆಯರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲು ಹೋದಾಗ ಮೊದಲೇ ನೊಂದಿರುವ ನಮ್ಮನ್ನು ಮತ್ತಷ್ಟು ನೋಯಿಸಬೇಡಿ. ಈ ಬಗ್ಗೆ ನಮ್ಮ ಬಳಿ ಏನನ್ನೂ ಕೇಳಬೇಡಿ. ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಅಷ್ಟಕ್ಕೂ ನೀವು ಒತ್ತಾಯ ಮಾಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಸದ್ಯಕ್ಕೆ ದೂರು ಕೊಟ್ಟಿರುವ ಓರ್ವ ಸಂತ್ರಸ್ತೆಯ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here