ಮಂಗಳೂರು(ರಾಯಚೂರು): ಜಿಲ್ಲೆಯಲ್ಲಿ ಭಾರಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಶಕ್ತಿನಗರದಲ್ಲಿ ಕಾರೊಂದು ಬೆಂಕಿ ಹತ್ತಿಕೊಂಡು ಉರಿದಿದೆ.
ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಠಾಂಶ 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಪ್ರಖರ ಬಿಸಿಲು ಹಾಗೂ ನಿರ್ಜಲೀಕರಣದಿಂದ ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವೀರೇಶ ಹನುಮಂತಪ್ಪ ಮಡಿವಾಳ(50), ಗಂಗಮ್ಮ ದೇವದಾಸಿ(60), ಅಂಗವಿಕಲ ಪ್ರದೀಪ ತಿಮ್ಮಣ್ಣ ಪೂಜಾರಿ (15) ಮತ್ತು ದುರ್ಗಮ್ಮ ಹನುಮಂತಪ್ಪ ಉಪ್ಪಾರ್ (60) ಎಂದು ಗುರುತಿಸಲಾಗಿದೆ.
ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುತ್ತಿದ್ದ ಹನುಮಂತ (45) ಅತಿಯಾದ ಬಾಯಾರಿಕೆಯಿಂದ ನೀರು ಕೇಳಿದ್ದಾರೆ. ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ‘ಸಿಂಧನೂರು ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಪ್ರಖರ ಬಿಸಿಲೊಂದೇ ಅಲ್ಲ, ಕೆಲವರು ಅನಾರೋಗ್ಯದಿಂದಲೂ ಮೃತಪಟ್ಟಿರುವ ಮಾಹಿತಿ ಇದೆ. ಮೂವರು ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ವೈದ್ಯಕೀಯ ತಂಡ ಪರಿಶೀಲನೆ ನಡೆಸುತ್ತಿದೆ‘ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಶ ಬಾಬು ತಿಳಿಸಿದ್ದಾರೆ. ರಾಯಚೂರು ತಾಲ್ಲೂಕಿನ ಶಕ್ತಿನಗರದ ವೈಟಿಪಿಎಸ್ ಮುಂಭಾಗ ರಾಯಚೂರು–ಹೈದರಾಬಾದ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ಹಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
‘ಜಿಲ್ಲೆಯಲ್ಲಿ ಒಂದು ವಾರ ಪ್ರಖರ ಬಿಸಿಲು ಇದೆ. ಮೇ 4ರಂದು 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು. ಮೇ 8ರ ವರೆಗೂ ಬಿಸಿಲಿನ ತಾಪ ಹಾಗೂ ಬಿಸಿಗಾಳಿ ಮುಂದುವರಿಯಲಿದೆ ಎನ್ನಲಾಗಿದೆ. ರೈತರು ಹೊಲಗಳಿಗೆ ತೆರಳಬಾರದು. ಸಾರ್ವಜನಿಕರು ಮಧ್ಯಾಹ್ನ ಮನೆಯಲ್ಲೇ ಇರಬೇಕು. ಬಿಸಿಲಲ್ಲಿ ತಿರುಗಾಡಬಾರದು‘ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹವಾಮಾನ ಘಟಕದ ಶಾಂತಪ್ಪ ದುತ್ತರಗಾಂವಿ ತಿಳಿಸಿದ್ದಾರೆ.