ಮೂರು ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹ-ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಮಂಗಳೂರು(ಬೆಂಗಳೂರು): ಮೂರು ತಿಂಗಳ ವೇತನ ಬಾಕಿ ಬಿಡುಗಡೆಗೆ ಆಗ್ರಹಿಸಿ ಆ್ಯಂಬುಲೆನ್ಸ್‌ ನೌಕರರು ಮೇ 6ರ ರಾತ್ರಿ 8ರಿಂದ ರಾಜ್ಯಾದ್ಯಂತ ಆ್ಯಂಬುಲೆನ್ಸ್‌ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

108 ಆ್ಯಂಬುಲೆನ್ಸ್‌ ಸೇವೆಯ ಉಸ್ತುವಾರಿ ವಹಿಸಿಕೊಂಡ ಜಿವಿಕೆ ಸಂಸ್ಥೆಯು 2023ರ ಡಿಸೆಂಬರ್‌ನಿಂದ ಎಪ್ರಿಲ್‌ ವರೆಗಿನ ವೇತನವನ್ನು ಬಾಕಿ ಇರಿಸಿಕೊಂಡಿದೆ. ಈ ನಡುವೆ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದಾಗ ಡಿಸೆಂಬರ್‌ ಹಾಗೂ ಜನವರಿ ತಿಂಗಳಿನ ಒಟ್ಟು ಮೊತ್ತದ ಅರ್ಧದಷ್ಟು ವೇತನ ಪಾವತಿಸಿದೆ. ಇನ್ನೂ 3 ತಿಂಗಳ ಪೂರ್ಣ ವೇತನ ಬಾಕಿಯಿದೆ ಎಂದು 108 ಆ್ಯಂಬುಲೆನ್ಸ್‌ ನೌಕರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ತಿಳಿಸಿದ್ದಾರೆ.

ವೇತನವನ್ನು ನಂಬಿರುವ ನೌಕರರು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಬಾರಿ ವೇತನ ಬಿಡುಗಡೆ ಮಾಡಲು ಸಂಸ್ಥೆಗೆ ಮನವಿ ಮಾಡಿದ್ದೇವೆ. ಆದರೂ ಮನವಿಗೆ ಸ್ಪಂದಿಸಿಲ್ಲ. ವೇತನ ಪಾವತಿಯಾಗದ ಹಿನ್ನಲೆಯಲಿ ಎರಡು ದಿನಗಳ ಹಿಂದೆ ಆ್ಯಂಬುಲೆನ್ಸ್‌ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಪ್ರಯತ್ನಿಸಿದ್ದರು. ಇಂಥ ಘಟನೆ ರಾಜ್ಯಾದ್ಯಂತ ಸಂಭವಿಸುತ್ತಿದೆ ಎಂದು ಆಂತಕ ವ್ಯಕ್ತಪಡಿಸಿದರು. ಸೋಮವಾರ ರಾತ್ರಿ 8 ಗಂಟೆಯೊಳೆಗೆ ಬಾಕಿಯಿರುವ ವೇತನ ಬಿಡುಗಡೆ ಮಾಡಬೇಕು. ಒಂದು ವೇಳೆ ವೇತನ ಸಿಗದಿದ್ದರೆ ರಾಜ್ಯಾದ್ಯಂತ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಇದರಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸರಕಾರಿ ವ್ಯವಸ್ಥೆಯಡಿ ರಾಜ್ಯಾದ್ಯಂತ 715ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು ಕಾರ್ಯಾಚರಿಸುತ್ತಿದೆ. ಇದರಲ್ಲಿ ಡ್ರೈವರ್‌ ಹಾಗೂ ಸಹಾಯಕ ಸಿಬ್ಬಂದಿ ಸಹಿತ 3000 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here