ಮಂಗಳೂರು: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿ ಎನ್ನಲಾದ ಸುಳ್ಯದ ಮುಸ್ತಫಾ ಪೈಚಾರು ಎಂಬವರನ್ನು ರಾಷ್ಟ್ರೀಯ ತನಿಖಾ ದಳದ(ಎನ್ ಐ ಎ) ಅಧಿಕಾರಿಗಳು ಸಕಲೇಶಪುರದಲ್ಲಿ ಬಂಧಿಸಿದೆ ಎಂದು ತಿಳಿದುಬಂದಿದೆ.
ಸಕಲೇಶಪುರದ ಆನೆಮಹಲ್ ನಲ್ಲಿ ಮುಸ್ತಫಾ ತಲೆಮರೆಸಿಕೊಂಡಿದ್ದು, ಇಲಿಯಾಸ್ ಎಂಬಾತನೊಂದಿಗೆ ಇಲ್ಲಿನ ಕಾಫಿ ಎಸ್ಟೇಟ್ ಒಂದರ ಸಿರಾಜ್ ಎಂಬಾತನ ಬಳಿ ಕೆಲಸಕ್ಕೆ ಸೇರಿದ್ದು, ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಮುಸ್ತಫಾನಿಗೆ ಆಶ್ರಯ ನೀಡಿದ್ದ ಸಿರಾಜ್ ಮತ್ತು ಇಲಿಯಾಸ್ ನನ್ನು ಎನ್ ಐ ಎ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಇವರನ್ನು ಬಂಧಿಸಲಾಗಿದ್ದು, ಮೂವರನ್ನು ಬೆಂಗಳೂರಿನತ್ತ ಕರೆದೊಯ್ಯಲಾಗಿದೆ ಎನ್ನಲಾಗಿದೆ. 2022 ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿ ಮುಸ್ತಫಾ ಪೈಚಾರಿಗೆ ಎನ್ ಐ ಎ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್ ಐ ಎ 20 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.